ತುಮಕೂರು: ದೇವಸ್ಥಾನದ ಗರ್ಭಗುಡಿ ಪ್ರವೇಶದ ವಿಚಾರವಾಗಿ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲೆ ಹೂಡಲಾಗಿದ್ದ ಹಲ್ಲೆ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಗೌಡ, ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರ ಬಳಿ ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಕಳೆದ ಆಗಸ್ಟ್ 12 ರಂದು ತುಮಕೂರು ತಾಲೂಕಿನ ಪ್ರಸಿದ್ಧ ಆರ್ತಿ ಉಕ್ಕಡ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿತ್ತು. ದೇವರ ದರ್ಶನಕ್ಕಾಗಿ ಮಕ್ಕಳೊಂದಿಗೆ ಆಗಮಿಸಿದ್ದ ಐಶ್ವರ್ಯ ಗೌಡ ಅವರಿಗೆ ಗರ್ಭಗುಡಿ ಪ್ರವೇಶದ ವಿಚಾರವಾಗಿ ಭದ್ರತಾ ಸೇವೆಯಲ್ಲಿದ್ದ ಪಿಎಸ್‌ಐ ಸವಿತಾ ಪಾಟೀಲ್ ತಡೆ ಒಡ್ಡಿದ್ದರು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆಕ್ರೋಶಗೊಂಡ ಐಶ್ವರ್ಯ ಗೌಡ ಅವರು ಪಿಎಸ್‌ಐ ಅವರ ಕೆನ್ನೆಗೆ ಹೊಡೆದಿದ್ದರು. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
ಘಟನೆ ಬೆನ್ನಲ್ಲೇ ಶಾಸಕ ಸುರೇಶ್ ಗೌಡ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಿ, "ಮಗಳಿಂದ ತಪ್ಪಾಗಿದೆ, ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ" ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಐಶ್ವರ್ಯ ಗೌಡ ಅವರೇ ಸ್ವತಃ ವಿಡಿಯೋ ಮೂಲಕ ಪಿಎಸ್‌ಐ ಸವಿತಾ ಪಾಟೀಲ್ ಅವರಲ್ಲಿ ಕ್ಷಮೆ ಯಾಚಿಸುವುದರೊಂದಿಗೆ ಈ ಇಡೀ ಪ್ರಕರಣಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ.