ಬೆಂಗಳೂರು: ನಂದಿನಿ ಹಾಲಿನ ಪುಡಿಯಲ್ಲಿ (ಮಿಲ್ಕ್ ಪೌಡರ್) ಕಲಬೆರಕೆಯಾಗಿದೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ, ಇದೀಗ ಲ್ಯಾಬ್ ವರದಿ ಹೊರಬಂದಿದ್ದು, ನಂದಿನಿ ಮಿಲ್ಕ್ ಪೌಡರ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅಧಿಕೃತವಾಗಿ ದೃಢಪಟ್ಟಿದೆ. ಈ ಮೂಲಕ ಸಾರ್ವಜನಿಕರಲ್ಲಿ ಹಾಗೂ ಗ್ರಾಹಕರಲ್ಲಿ ಇದ್ದ ಆತಂಕ ದೂರವಾಗಿದೆ.
ಈ ಹಿಂದೆ ನಂದಿನಿ ಮಿಲ್ಕ್ ಪೌಡರ್ ಗುಣಮಟ್ಟದ ಬಗ್ಗೆ ಸಾರ್ವಜನಿಕವಾಗಿ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಕೂಡಲೇ ಇದರ ಗುಣಮಟ್ಟವನ್ನು ಪರೀಕ್ಷಿಸುವಂತೆ ಆರೋಗ್ಯ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರನ್ವಯ, ಕಳೆದ ಸೆಪ್ಟೆಂಬರ್ 26ರಂದು ವಿವಿಧ ಕೆಎಂಎಫ್ (KMF) ಡೈರಿಗಳಿಂದ ಹಾಲಿನ ಪುಡಿಯ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರದ (FSSAI) ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ಸದ್ಯ ಬಂದಿರುವ ಅಧಿಕೃತ ಲ್ಯಾಬ್ ವರದಿಯ ಪ್ರಕಾರ, ಪರೀಕ್ಷೆಗೆ ಒಳಪಡಿಸಿದ ನಂದಿನಿ ಮಿಲ್ಕ್ ಪೌಡರ್ ಮಾದರಿಗಳು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪೂರೈಸಿವೆ. ಇದು ಯಾವುದೇ ಕಲಬೆರಕೆಯಿಲ್ಲದೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದ್ದು, ಗ್ರಾಹಕರು ಯಾವುದೇ ಆತಂಕವಿಲ್ಲದೆ ಇದನ್ನು ಬಳಸಬಹುದು ಎಂದು ತಿಳಿಸಲಾಗಿದೆ.