ಶಿವಮೊಗ್ಗ: ಸಾಗರ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜ್ ಎಂ. ಎಂಬುವವರು ನಕಲಿ ಜಾತಿ ಪ್ರಮಾಣಪತ್ರ ಪಡೆದು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ, ನಿಯಮಾನುಸಾರ ವಿಚಾರಣೆ ಕೈಗೊಳ್ಳುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು (ಡಿಸಿಆರ್‌ಇ) ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರಿಗೆ ನಿರ್ದೇಶನ ನೀಡಿದೆ.
ದೂರಿನ ವಿವರ:
ಸಾಗರ ಟೌನ್‌ನ ಎಸ್.ಎನ್. ನಗರ, ಎಕೆ ಕಾಲೋನಿ ನಿವಾಸಿ ನಾಗರಾಜ್ ಎಂ. ಬಿನ್ ಮಾಣಿಕ್ಯ ಅವರು ಮೂಲತಃ ತಮಿಳುನಾಡು ರಾಜ್ಯದವರಾಗಿದ್ದು, "ಅರುಂಧತಿಯಾರ್" ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಅವರು ಸಾಗರ ತಾಲೂಕು ತಹಶೀಲ್ದಾರ್ ಕಚೇರಿಯಿಂದ ಪರಿಶಿಷ್ಟ ಜಾತಿಗೆ ಒಳಪಡುವ "ಆದಿ ಕರ್ನಾಟಕ" ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಪ್ರಮಾಣಪತ್ರವನ್ನು ಬಳಸಿ ಪರಿಶಿಷ್ಟ ಜಾತಿಯವರಿಗೆ ಸಿಗುವ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡು ಸಾಗರ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ನೌಕರಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಾಗರ ತಾಲೂಕು ಸಂಚಾಲಕರಾದ ಲಕ್ಷ್ಮಣ ಸಾಗರ್ ಅವರು ದೂರು ದಾಖಲಿಸಿದ್ದರು.
ಕಾನೂನು ರೀತ್ಯಾ ತನಿಖೆಗೆ ಸೂಚನೆ:
ದಾವಣಗೆರೆ ಪೂರ್ವ ವಲಯದ ಡಿಸಿಆರ್‌ಇ ಪೊಲೀಸ್ ಅಧೀಕ್ಷಕರ ವರದಿಯ ಹಿನ್ನೆಲೆಯಲ್ಲಿ, ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಉಪ ಮಹಾನಿರೀಕ್ಷಕರಾದ (ಡಿಐಜಿಪಿ) ವರ್ತಿಕಾ ಕಟಿಯಾರ್ (ಐಪಿಎಸ್) ಅವರು ಈ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಎಸ್ಸಿ/ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ಮತ್ತು ನಿಯಮಗಳು 1992ರ ಅಡಿಯಲ್ಲಿ ಆರೋಪಿತರ ಜಾತಿ ವಿಚಾರಣೆ ನಡೆಸಿ ಅಗತ್ಯ ಮುಂದಿನ ಕ್ರಮ ಜರುಗಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...
