ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರ ವೇತನ ವೆಚ್ಚಕ್ಕಾಗಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ 3 ತಿಂಗಳ ಅವಧಿಗೆ ಒಟ್ಟು ₹560.24 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಪ್ರತಿಯೊಬ್ಬ ಅರ್ಹ ನೌಕರರಿಗೂ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ನಿಯಮಾನುಸಾರ ವೇತನ ಪಾವತಿಯಾಗುವುದನ್ನು ಸಂಬಂಧಿಸಿದ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿಗಳು (DDO) ಖಚಿತಪಡಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ವೇತನ ಪಾವತಿಯಲ್ಲಿ ಯಾವುದೇ ರೀತಿಯ ವಿಳಂಬ ಉಂಟಾದರೆ ಅದಕ್ಕೆ ಸಂಬಂಧಪಟ್ಟ ಡಿಡಿಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ವೇತನ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಪ್ರತಿ ತಿಂಗಳ 10ನೇ ತಾರೀಖಿನೊಳಗೆ ರಾಜ್ಯ ಯೋಜನಾ ನಿರ್ದೇಶಕರು ಎಲ್ಲಾ ಡಿಡಿಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಇದರೊಂದಿಗೆ, ಎಲ್ಲಾ ಹಂತಗಳಲ್ಲಿ ಅನುದಾನ ಸರಿಯಾಗಿ ಬಳಕೆಯಾಗಿರುವುದನ್ನು ಖಾತರಿಪಡಿಸಿಕೊಳ್ಳಲು ಪ್ರತಿ ತಿಂಗಳ 12ನೇ ತಾರೀಖಿನೊಳಗೆ ಕಡ್ಡಾಯವಾಗಿ 'ವೇತನ ಬಳಕೆ ಪ್ರಮಾಣ ಪತ್ರ' (Utilization Certificate) ಪಡೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ.