ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶಾಕ್ ನೀಡಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸುವವರು, ಇತರರ ಟಿಕೆಟ್ ಬಳಸಿ ಸಂಚರಿಸುವವರು ಹಾಗೂ ರೈಲು-ನಿಲ್ದಾಣಗಳಲ್ಲಿ ಅನಧಿಕೃತ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಜುಲೈ 1ರಿಂದ ಜಾರಿಗೆ ಬರುವ ಹೊಸ ನಿಯಮಗಳ ಪ್ರಕಾರ, ದಂಡದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಕೆಲವು ಉಲ್ಲಂಘನೆಗಳಿಗೆ ₹5,000 ವರೆಗೆ ದಂಡ ಹಾಗೂ ಜೈಲು ಶಿಕ್ಷೆಯೂ ಎದುರಾಗಬಹುದು.
ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ರೈಲ್ವೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಹೊಸ ನಿಯಮಗಳು ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿವೆ.
ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ₹500 ದಂಡ
ಇಲ್ಲಿಯವರೆಗೆ ಟಿಕೆಟ್ ಇಲ್ಲದೆ ಪ್ರಯಾಣಿಸುವ ವೇಳೆ ಸಿಕ್ಕಿಬಿದ್ದವರಿಗೆ ಕನಿಷ್ಠ ₹250 ದಂಡ ವಿಧಿಸಲಾಗುತ್ತಿತ್ತು. ಇದೀಗ ಅದನ್ನು ₹500ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಟಿಕೆಟ್ ಇಲ್ಲದೆ ರೈಲು ಪ್ರಯಾಣ ಮಾಡುವವರಿಗೆ ಭಾರೀ ಹೊರೆ ಬೀಳಲಿದೆ.ಇದಲ್ಲದೆ, ಇತರರ ಹೆಸರಿನ ಟಿಕೆಟ್ ಬಳಸಿಕೊಂಡು ಪ್ರಯಾಣಿಸುವವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹ ಪ್ರಯಾಣಿಕರು ಪೂರ್ಣ ಪ್ರಯಾಣ ದರದ ಜೊತೆಗೆ ಕನಿಷ್ಠ ₹500 ದಂಡವನ್ನು ಪಾವತಿಸಬೇಕಾಗುತ್ತದೆ. ದಂಡ ಪಾವತಿಸದಿದ್ದರೆ ಪ್ರಕರಣವನ್ನು ನ್ಯಾಯಾಲಯಕ್ಕೆ ಕಳುಹಿಸಬಹುದು.
ಅನಧಿಕೃತ ವ್ಯಾಪಾರ, ಭಿಕ್ಷಾಟನೆಗೂ ಕಠಿಣ ಕ್ರಮ
ರೈಲುಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಅನುಮತಿ ಇಲ್ಲದೆ ವಸ್ತುಗಳ ಮಾರಾಟ, ಬೀದಿ ವ್ಯಾಪಾರ ಅಥವಾ ಪ್ರಯಾಣಿಕರನ್ನು ಖರೀದಿಗೆ ಒತ್ತಾಯಿಸುವಂತಹ ಚಟುವಟಿಕೆಗಳಿಗೆ ₹2,000 ವರೆಗೆ ದಂಡ ವಿಧಿಸಲಾಗುತ್ತದೆ.ದಂಡ ಪಾವತಿಸದಿದ್ದರೆ ಪ್ರಕರಣ ನ್ಯಾಯಾಲಯಕ್ಕೆ ಹೋಗಬಹುದು. ನ್ಯಾಯಾಲಯವು ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ₹5,000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಅದೇ ತಪ್ಪನ್ನು ಪದೇ ಪದೇ ಮಾಡುವವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯೂ ವಿಧಿಸಬಹುದು.
ಮದ್ಯಪಾನ ಮಾಡಿ ಗಲಾಟೆ ಮಾಡಿದರೆ ಕಠಿಣ ಕ್ರಮ
ರೈಲು ಅಥವಾ ರೈಲ್ವೆ ಆವರಣದಲ್ಲಿ ಮದ್ಯಪಾನ ಮಾಡಿ ಇತರ ಪ್ರಯಾಣಿಕರಿಗೆ ತೊಂದರೆ ನೀಡುವವರು, ನಿಂದನೆ ಮಾಡುವವರು ಅಥವಾ ಗಲಾಟೆ ಸೃಷ್ಟಿಸುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುತ್ತದೆ.ಅಂತಹ ವ್ಯಕ್ತಿಗಳನ್ನು ರೈಲಿನಿಂದ ಕೆಳಗಿಳಿಸಿ ದಂಡ ವಿಧಿಸುವುದರ ಜೊತೆಗೆ, ಅಗತ್ಯವಿದ್ದರೆ ಕಾನೂನು ಕ್ರಮಗಳನ್ನೂ ಕೈಗೊಳ್ಳಬಹುದು.
ಎಲ್ಲಾ ರೈಲ್ವೆ ವಲಯಗಳಿಗೆ ಆದೇಶ
ಈ ಹೊಸ ನಿಯಮಗಳ ಬಗ್ಗೆ ಎಲ್ಲಾ ರೈಲ್ವೆ ವಲಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡುವಂತೆ ರೈಲ್ವೆ ಸಚಿವಾಲಯ ಜೂನ್ 18ರಂದು ಆದೇಶ ಹೊರಡಿಸಿದೆ. ಜುಲೈ 1ರಿಂದ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರೈಲ್ವೆ ಮಂಡಳಿ ಸೂಚಿಸಿದೆ.ರೈಲ್ವೆ ಸಚಿವಾಲಯದ ಪ್ರಕಾರ, ಟಿಕೆಟ್ ಇಲ್ಲದ ಪ್ರಯಾಣ, ಟಿಕೆಟ್ ದುರುಪಯೋಗ ಹಾಗೂ ಇತರೆ ನಿಯಮ ಉಲ್ಲಂಘನೆಗಳನ್ನು ತಡೆಯುವ ಉದ್ದೇಶದಿಂದ ಈ ಬದಲಾವಣೆಗಳನ್ನು ತರಲಾಗಿದೆ.