ಬೆಂಗಳೂರು : ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ರಾಜ್ಯಾದ್ಯಂತ ಪ್ರಸ್ತುತ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹೋಂ ಸ್ಟೇಗಳನ್ನು ಅಧಿಕೃತಗೊಳಿಸಲು ಪ್ರವಾಸೋದ್ಯಮ ಇಲಾಖೆಯು ಆನ್‌ಲೈನ್ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಅಂತಿಮ ಗಡುವು ನೀಡಿದೆ.
ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಹೋಂ ಸ್ಟೇಗಳು ಯಾವುದೇ ಸೂಕ್ತ ಪರವಾನಗಿ ಇಲ್ಲದೆ ನಡೆಯುತ್ತಿರುವುದನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಸದ್ಯ ಪ್ರಗತಿ ಮಂದಗತಿಯಲ್ಲಿದೆ. ಆದಾಗ್ಯೂ, ವಿಜಯನಗರ ಜಿಲ್ಲೆಯಿಂದ ಗರಿಷ್ಠ 291 ಅರ್ಜಿಗಳು ಸಲ್ಲಿಕೆಯಾಗುವ ಮೂಲಕ ಮುಂಚೂಣಿಯಲ್ಲಿದೆ. ನೋಂದಣಿ ವೇಗಗೊಳಿಸಲು ಪ್ರವಾಸೋದ್ಯಮ ಪೂರಕ ಜಿಲ್ಲೆಗಳನ್ನು ಕೇಂದ್ರೀಕರಿಸಿ ಮಾಲೀಕರಿಗೆ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸುವ ಕೆಲಸ ನಡೆಯುತ್ತಿದೆ.
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮಾ) ವ್ಯಾಪ್ತಿಗೆ ಒಳಪಡುವ ಹನುಮನ ಜನ್ಮಭೂಮಿ ಅಂಜನಾದ್ರಿ ಹಾಗೂ ಆನೆಗೊಂದಿ ಭಾಗದ 15 ಹಳ್ಳಿಗಳಲ್ಲಿ ನಿಯಮಗಳು ಕಠಿಣವಾಗಿದ್ದವು. ಆದರೆ ಈಗ ವಿಶೇಷ ವಿನಾಯಿತಿ ನೀಡಲಾಗಿದ್ದು, ಗ್ರಾಮ ಪಂಚಾಯಿತಿ ಹಾಗೂ 'ಹವಾಮಾ'ದಿಂದ ಸೂಕ್ತ ಪರವಾನಗಿ ಪಡೆದು ನಿರ್ಮಿಸಿದ ಮನೆಗಳನ್ನು ನಿಗದಿತ ನಿಯಮಾವಳಿಗಳಡಿ ಹೋಂ ಸ್ಟೇಗಳಾಗಿ ಪರಿವರ್ತಿಸಲು ಅವಕಾಶ ನೀಡಲಾಗಿದೆ.
ಕನಿಷ್ಠ 2 ಹಾಗೂ ಗರಿಷ್ಠ 6 ಕೊಠಡಿಗಳನ್ನು ಹೊಂದಿರುವ ಆಸ್ತಿ ಮಾಲೀಕರು ಮಾತ್ರ ಹೋಂ ಸ್ಟೇ ನೋಂದಣಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಉತ್ತಮ ವಾಸಸ್ಥಳ, ಕಟ್ಟಡ ಪರವಾನಗಿ ಹಾಗೂ ಭೂ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಪ್ರವಾಸಿಗರಿಗೆ ಸ್ಥಳೀಯರ ಮನೆಯಲ್ಲೇ ಹಣ ಪಾವತಿಸಿ ವಾಸ್ತವ್ಯ ಹೂಡಲು, ಸ್ಥಳೀಯ ಊಟ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದ್ದು, ಸ್ಥಳೀಯ ಮಟ್ಟದಲ್ಲಿ ಅಪಾರ ಉದ್ಯೋಗ ಸೃಷ್ಟಿಸಲಿದೆ.
ಸೆಪ್ಟೆಂಬರ್ 27ರ ವಿಶ್ವ ಪ್ರವಾಸೋದ್ಯಮ ದಿನದ ನಿಮಿತ್ತ, ಸೆ.29ರೊಳಗೆ ನೋಂದಣಿಯಾಗುವ ಹೋಂ ಸ್ಟೇಗಳಿಗೆ ಮಾನ್ಯತಾ ಪತ್ರ ನೀಡಲು ಕೊಪ್ಪಳ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಆಸಕ್ತ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಗಡುವಿನೊಳಗೆ ನೋಂದಣಿ ಮಾಡಿಕೊಳ್ಳದೆ, ಅನಧಿಕೃತವಾಗಿ ರೂಂ ಬುಕಿಂಗ್ ಮುಂದುವರಿಸುವ ಹೋಂ ಸ್ಟೇಗಳ ವಿರುದ್ಧ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.