ದಾವಣಗೆರೆ : ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಒಂದೇ ಹಂತದಲ್ಲಿ ಘೋಷಿಸುವುದಿಲ್ಲ. ನಿಗದಿತ ಮಾನದಂಡಗಳಿಗೆ ಅರ್ಹವಾಗುವ ತಾಲೂಕುಗಳನ್ನು ಹಂತ ಹಂತವಾಗಿ ಪರಿಶೀಲಿಸಿ, ಗ್ರೌಂಡ್ ಟ್ರೂಥಿಂಗ್ ನಡೆಸಿದ ಬಳಿಕ ಘೋಷಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬಳಿಕ 24 ತಾಲೂಕುಗಳನ್ನು ಸೇರಿಸಲಾಗಿದೆ. ಇನ್ನೂ 52 ತಾಲೂಕುಗಳನ್ನು ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಘೋಷಿಸುತ್ತೇವೆ. ಮುಂದಿನ ಹಂತದಲ್ಲಿ ಸುಮಾರು 50 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಪ್ರಸ್ತುತ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಮುಂಗಾರು ಅವಧಿ ಪೂರ್ಣಗೊಳ್ಳುವವರೆಗೂ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುವುದು. ಜಗಳೂರು ಸೇರಿದಂತೆ ಈಗ ಪಟ್ಟಿಯಲ್ಲಿ ಇಲ್ಲದ ತಾಲೂಕುಗಳೂ ಮುಂದಿನ ಹಂತಗಳಲ್ಲಿ ಅರ್ಹತೆ ಪಡೆದಲ್ಲಿ ಘೋಷಣೆಯಾಗಲಿವೆ. ಹೀಗಾಗಿ ತಮ್ಮ ತಾಲೂಕು ಇನ್ನೂ ಪಟ್ಟಿಗೆ ಸೇರಿಲ್ಲ ಎಂಬ ಆತಂಕ ಯಾರಿಗೂ ಬೇಡ.
ಬರ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚೆ : ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಬರದಿಂದ ಉಂಟಾಗಿರುವ ನಷ್ಟ, ರೈತರಿಗೆ ನೆರವು ಹಾಗೂ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಪರಿಹಾರದ ಕುರಿತು ಸದನದಲ್ಲಿ ವಿಪಕ್ಷಗಳ ಅಭಿಪ್ರಾಯ ಪಡೆಯಲಾಗುವುದು.
ಬರ ಪರಿಹಾರ ಮತ್ತು ರೈತರ ಸಾಲಮನ್ನಾ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಗುವುದು. ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಬೇಡಿಕೆಗಳನ್ನು ಮಂಡಿಸುವ ಉದ್ದೇಶವಿದೆ.
101 ತಾಲೂಕುಗಳಲ್ಲಿ ₹18,000 ಕೋಟಿ ನಷ್ಟದ ಅಂದಾಜು : ಮೊದಲ ಹಂತದಲ್ಲಿ ಘೋಷಿಸಲಾದ 101 ತಾಲೂಕುಗಳಲ್ಲಿ ಸುಮಾರು ₹18,000 ಕೋಟಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಸುಮಾರು ₹3,500 ಕೋಟಿ ಪರಿಹಾರ ಕೋರಲಾಗಿದೆ. ಇದು ಮೊದಲ ಮೆಮೊರಾಂಡಂ ಆಗಿದ್ದು, ಮುಂದಿನ ಹಂತಗಳಲ್ಲಿ ಘೋಷಣೆಯಾಗುವ ತಾಲೂಕುಗಳ ನಷ್ಟದ ವಿವರಗಳನ್ನು ಒಳಗೊಂಡ ಎರಡನೇ ಹಾಗೂ ಮೂರನೇ ಮೆಮೊರಾಂಡಂಗಳನ್ನು ಸಹ ಸಲ್ಲಿಸಲಾಗುವುದು.
ಕಳೆದ ವರ್ಷ ರಾಜ್ಯದಲ್ಲಿ ಸುಮಾರು ₹39,000 ಕೋಟಿ ನಷ್ಟವಾಗಿದ್ದು, ₹18,000 ಕೋಟಿ ಪರಿಹಾರ ಕೋರಲಾಗಿತ್ತು. ಆದರೆ ಸುಮಾರು ₹3,400 ಕೋಟಿ ಮಾತ್ರ ದೊರೆತಿತ್ತು.
ರೈತರು ತೀವ್ರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶದ ರೈತರ ನೆರವಿಗೆ ಬರುವಂತಹ ನಿರ್ಧಾರ ಕೈಗೊಳ್ಳಬೇಕು. ಹಿಂದೆ ಡಾ. ಮನಮೋಹನ್ ಸಿಂಗ್ ಅವರು ದೇಶದ ರೈತರ 72 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದರು. ಈ ಬಾರಿಯೂ ರೈತರ ಸಾಲಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು.
*ಕೇಂದ್ರದಿಂದ ಮಲತಾಯಿ ಧೋರಣೆ : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಪಾಲು ಹಾಗೂ ವಿವಿಧ ಯೋಜನೆಗಳ ಅನುದಾನಗಳು ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಜಲಜೀವನ್ ಮಿಷನ್ ಯೋಜನೆಗೆ ಇನ್ನೂ ₹17 ಸಾವಿರ ಕೋಟಿ ಬರಬೇಕು. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.