ಬೆಂಗಳೂರು: ರಾಜ್ಯ ಸರ್ಕಾರ ಮೇ 11ರಿಂದ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಆಲ್ಕೋಹಾಲ್ ಆಧಾರಿತ ತೆರಿಗೆ (AIB) ಪದ್ಧತಿಯಿಂದಾಗಿ ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಭಾರಿ ಜಿಗಿತ ಕಂಡುಬಂದಿದೆ. ಪ್ರಸಕ್ತ 2026-27ನೇ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) ಒಟ್ಟು ₹22,191.63 ಕೋಟಿ ರಾಜಸ್ವ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ₹19,570.23 ಕೋಟಿಗೆ ಹೋಲಿಸಿದರೆ, ಈ ಬಾರಿ ₹2,621.40 ಕೋಟಿ ಅಂದರೆ ಶೇ. 13.39 ರಷ್ಟು ಹೆಚ್ಚುವರಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದುಬಂದಿದೆ.
ಅಬಕಾರಿ ಆದಾಯದಲ್ಲಿ ಕಂಡುಬಂದ ಈ ಗಮನಾರ್ಹ ಏರಿಕೆಗೆ ಬಿಯರ್ ಮಾರಾಟದಲ್ಲಾದ ಭಾರಿ ಪ್ರಮಾಣದ ಬೆಳವಣಿಗೆಯೇ ಪ್ರಮುಖ ಕಾರಣವಾಗಿದೆ. ಕಳೆದ ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 195.27 ಲಕ್ಷ ಬಾಕ್ಸ್‌ನಷ್ಟಿದ್ದ ಬಿಯರ್ ಮಾರಾಟವು, ಈ ವರ್ಷದ ಇದೇ ಅವಧಿಯಲ್ಲಿ 275.96 ಲಕ್ಷ ಬಾಕ್ಸ್‌ಗಳಿಗೆ ತಲುಪುವ ಮೂಲಕ ಶೇ. 41.32 ರಷ್ಟು ಬೃಹತ್ ಜಿಗಿತ ಕಂಡಿದೆ. ಮತ್ತೊಂದೆಡೆ, ಭಾರತೀಯ ತಯಾರಿಕೆಯ ಮದ್ಯ (IML) ಮಾರಾಟ ಪ್ರಮಾಣದಲ್ಲಿ ಶೇ. 1.14 ರಷ್ಟು ಮಾತ್ರ ಸಣ್ಣ ಪ್ರಮಾಣದ ಏರಿಕೆ ದಾಖಲಾಗಿದೆ.
ಇದಲ್ಲದೆ, ಲೈಸೆನ್ಸ್ ಶುಲ್ಕ, ದಂಡ ಸೇರಿದಂತೆ ವಿವಿಧ ಮೂಲಗಳಿಂದ ಈ ಆರು ತಿಂಗಳ ಅವಧಿಯಲ್ಲಿ ಒಟ್ಟು ₹1,389.18 ಕೋಟಿ ರಾಜಸ್ವ ಸಂಗ್ರಹವಾಗಿದೆ. ವೈಜ್ಞಾನಿಕವಾಗಿ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ಹೊಸ ನೀತಿಯು ಮದ್ಯದ ಮಾರಾಟ ಹಾಗೂ ರಾಜಸ್ವ ಸಂಗ್ರಹಣೆ ಎರಡಕ್ಕೂ ಹೆಚ್ಚಿನ ಉತ್ತೇಜನ ನೀಡಿದೆ ಎಂದು ಅಬಕಾರಿ ಇಲಾಖೆಯ ವರದಿ ಸ್ಪಷ್ಟಪಡಿಸಿದೆ.