LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಮೊಗ್ಗದಲ್ಲಿ 72ನೇ ವನ್ಯಜೀವಿ ಸಪ್ತಾಹ: ವಿವಿಧ ಕಾರ್ಯಕ್ರಮಗಳ ಮೂಲಕ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ವನ್ಯಜೀವಿ ಜಾಗೃತಿ

ಶಿವಮೊಗ್ಗ: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ ನಗರದಲ್ಲಿ 72ನೇ ವನ್ಯಜೀವಿ ಸಪ್ತಾಹ-2026 ಅನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿಸಿಎಫ್ ಡಾ. ಕೆ.ಟಿ. ಹನುಮಂತಪ್ಪ, ವನ್ಯಜೀವಿ ವಲಯದ ಡಿಸಿಎಫ್ ಪ್ರಸನ್ನ ಪಟಗಾರ್ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು.

news_1791201308_3_513.webp

ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪರಿಸರ ಜಾಗೃತಿಯ ಸೈಕಲ್ ಸವಾರಿ ಕಾರ್ಯಕ್ರಮಗಳು ಸಪ್ತಾಹದ ಪ್ರಮುಖ ಆಕರ್ಷಣೆಯಾಗಿದ್ದವು.

ವನ್ಯಜೀವಿ ಸಪ್ತಾಹಕ್ಕೆ ಚಾಲನೆ ಮತ್ತು ಜಿಲ್ಲಾ ಮಟ್ಟದ ರಸಪ್ರಶ್ನೆ

ಅಕ್ಟೋಬರ್ 2 ರಂದು ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ವನ್ಯಜೀವಿ ಸಪ್ತಾಹದ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಹಂತದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಹಾಗೂ ಪೂಜ್ಯ ಶ್ರೀಶ್ರೀ ನಾದಮಯಾನಂದನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಜಿ. ಲೋಹಿತ್, ಎಸಿಎಫ್ ಸಿ.ಬಿ. ಗುರುರಾಜ್ ಹಾಗೂ ಕಾಲೇಜಿನ ಪ್ರಾಂಶುಪಾಲ ಎಸ್.ವಿ. ಗುರುರಾಜ್ ಅವರು ಉಪಸ್ಥಿತರಿದ್ದು ಚಾಲನೆ ನೀಡಿದರು.

news_1791201308_5_302.webp

ಈ ವೇಳೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ. ಹನುಮಂತಪ್ಪ ಮಾತನಾಡಿ, ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಅತ್ಯಂತ ಮಹತ್ವದ್ದು. ಕಾಡು ಮತ್ತು ವನ್ಯಜೀವಿಗಳಿದ್ದರೆ ಮಾತ್ರ ಮನುಕುಲಕ್ಕೆ ಶುದ್ಧ ನೀರು, ಗಾಳಿ ಹಾಗೂ ಉತ್ತಮ ಪರಿಸರ ದೊರೆಯಲು ಸಾಧ್ಯ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕರ್ತವ್ಯವಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕನ ಆದ್ಯ ಜವಾಬ್ದಾರಿ. ವಿಶೇಷವಾಗಿ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ವನ್ಯಜೀವಿಗಳ ಮಹತ್ವವನ್ನು ಅರಿತುಕೊಂಡು, ಪರಿಸರ ಸ್ನೇಹಿ ಜೀವನಶೈಲಿ ರೂಢಿಸಿಕೊಂಡಾಗ ಮಾತ್ರ ಹಸಿರು ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯವಾಗುತ್ತದೆ ಎಂಬುದಾಗಿ ತಿಳಿಸಿದರು.

news_1791201308_2_935.webp

ಶಿವಮೊಗ್ಗ ವೃತ್ತ ವ್ಯಾಪ್ತಿಯ 10 ತಾಲೂಕುಗಳ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಯ 1300ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಈ ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.

ನಗರದ ಪ್ರಮುಖ ರಸ್ತೆಗಳಲ್ಲಿ ವನ್ಯಜೀವಿ ಸಂರಕ್ಷಣಾ ಕಾಲ್ನಡಿಗೆ ಜಾಥಾ

ಸಪ್ತಾಹದ ಎರಡನೇ ದಿನವಾದ ಅಕ್ಟೋಬರ್ 3 ರಂದು ನಗರದಲ್ಲಿ ಬೃಹತ್ ವನ್ಯಜೀವಿ ಸಂರಕ್ಷಣಾ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕುವೆಂಪು ರಂಗಮಂದಿರದ ಆವರಣದಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಅವರು ಜಾಥಾಕ್ಕೆ ಹಸಿರು ನಿಶಾನೆ ತೋರಿದರು.

news_1791201307_0_593.webp

ಆ ಬಳಿಕ ಮಾತನಾಡಿದಂತ ಅವರು, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ತಪ್ಪಿಸಿ, ಸಾಮರಸ್ಯದಿಂದ ಬದುಕುವುದು ಇಂದಿನ ತುರ್ತು ಅಗತ್ಯ. ಕಾಡಂಚಿನ ಪ್ರದೇಶಗಳು ಹಾಗೂ ಜೀವವೈವಿಧ್ಯತೆಯ ರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ. ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಲಾದ ರಸಪ್ರಶ್ನೆ, ಕಾಲ್ನಡಿಗೆ ಜಾಥಾ ಹಾಗೂ ಸೈಕಲ್ ಸವಾರಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮತ್ತು ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದೇ ಬದ್ಧತೆ ಹಾಗೂ ಪರಿಸರ ಪ್ರೇಮ ವರ್ಷಪೂರ್ತಿ ಮುಂದುವರಿಯಬೇಕು ಎಂದು ಹೇಳಿದರು.

news_1791201308_4_410.webp

ಕುವೆಂಪು ರಂಗಮಂದಿರದ ಆವರಣದಿಂದ ಹೊರಟ ಜಾಥಾವು ಕರ್ನಾಟಕ ಸಂಘ, ಅಮೀರ್ ಅಹ್ಮದ್ ಸರ್ಕಲ್, ಗೋಪಿ ಸರ್ಕಲ್, ಮಹಾವೀರ ಸರ್ಕಲ್ ಮತ್ತು ಡಿಸಿ ಕಚೇರಿ ಮಾರ್ಗವಾಗಿ ವನ್ಯಜೀವಿ ವಿಭಾಗದ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು.

news_1791201307_1_797.webp

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಬಿ. ಗುರುರಾಜ್, ಪರಿಸರ ತಜ್ಞ ಡಾ. ನಾಗರಾಜ್, ಡಾ. ಅರುಣ್ ಖರಾಟೆ, ಡಾ. ಯೋಗೀಶ್ ಜಾನತೇಕರ್, ಡಾ. ಪ್ರಸಾದ್, ಡಾ. ವಿದ್ಯಾಶಂಕರ್ ಹಾಗೂ ಅರಣ್ಯ ಸಿಬ್ಬಂದಿ ಉಪಸ್ಥಿತರಿದ್ದರು. ಇರುವಕ್ಕಿ ಅರಣ್ಯ ಮಹಾವಿದ್ಯಾಲಯ, ಸಹ್ಯಾದ್ರಿ ಕಾಲೇಜು, ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಶು ವೈದ್ಯಕೀಯ ವಿದ್ಯಾಲಯ, ಡಿವಿಎಸ್, ಎನ್ಇಎಸ್ ಸೇರಿದಂತೆ ವಿವಿಧ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಜ್ಜೆ ಹಾಕಿ ಜಾಗೃತಿ ಮೂಡಿಸಿದರು.

news_1791201676_0_921.webp

"ಆವಾಸ ಸ್ಥಾನಗಳ ಸಂಪರ್ಕ" ಧ್ಯೇಯವಾಕ್ಯದೊಂದಿಗೆ ಸೈಕಲ್ ಸವಾರಿ

ಸಪ್ತಾಹದ ಮೂರನೇ ದಿನವಾದ ಅಕ್ಟೋಬರ್ 4 ರಂದು "ಆವಾಸ ಸ್ಥಾನಗಳ ಸಂಪರ್ಕ, ವನ್ಯಜೀವಿಗಳ ಸಮೃದ್ಧಿ - ವನ್ಯಜೀವಿಗಳಿಗಾಗಿ ವೇಗವನ್ನು ಕಡಿಮೆ ಮಾಡಿ ರಸ್ತೆಯಲ್ಲಿ ಅವಕಾಶ ಕಲ್ಪಿಸಿ, ಭೂ ಪ್ರದೇಶದಲ್ಲಿ ಅವಕಾಶ ಕಲ್ಪಿಸಿ" ಎಂಬ ಘೋಷವಾಕ್ಯದೊಂದಿಗೆ ಪರಿಸರ ಜಾಗೃತಿಯ ಸೈಕಲ್ ಸವಾರಿ ಆಯೋಜಿಸಲಾಯಿತು.

ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಅವರು ವನ್ಯಜೀವಿ ವಿಭಾಗದ ಕಚೇರಿ ಮುಂಭಾಗ ಸೈಕಲ್ ಸವಾರಿಗೆ ಚಾಲನೆ ನೀಡಿದರು.

news_1791201309_7_873.webp

ಚಾಲನೆ ನೀಡಿದ ಬಳಿಕ ಮಾತನಾಡಿದಂತ ಅವರು, ಈ ಬಾರಿಯ ವನ್ಯಜೀವಿ ಸಪ್ತಾಹದ ಪ್ರಮುಖ ಧ್ಯೇಯವಾಕ್ಯ 'ಆವಾಸ ಸ್ಥಾನಗಳ ಸಂಪರ್ಕ ಮತ್ತು ವನ್ಯಜೀವಿಗಳ ಸಮೃದ್ಧಿ'. ರಸ್ತೆಗಳು ಕಾಡುಗಳ ಮಧ್ಯೆ ಹಾದುಹೋಗುವಾಗ ವನ್ಯಜೀವಿಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಬಾರದು. ವಾಹನ ಸವಾರರು ಅರಣ್ಯ ಪ್ರದೇಶಗಳ ಮಾರ್ಗದಲ್ಲಿ ಚಲಿಸುವಾಗ ವೇಗವನ್ನು ನಿಯಂತ್ರಿಸಿ, ರಸ್ತೆ ದಾಟುವ ಮೂಕ ಪ್ರಾಣಿಗಳಿಗೆ ಮೊದಲ ಆದ್ಯತೆ ನೀಡಿ ಅವಕಾಶ ಕಲ್ಪಿಸಬೇಕು. ಸೈಕಲ್ ಸವಾರಿಯಂತಹ ಪರಿಸರಸ್ನೇಹಿ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಇಂತಹ ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸಲು ಪ್ರೇರಣೆಯಾಗಲಿ ಎಂದು ತಿಳಿಸಿದರು.

news_1791201603_0_855.webp

ಜಾಥಾವು ಕುವೆಂಪು ರಸ್ತೆ, ಆಲ್ಕೊಳ ಸರ್ಕಲ್, ಆಯನೂರು, ಸಿರಿಗೆರೆ, ಸಂಪಿಗೆಹಳ್ಳ ಮಾರ್ಗವಾಗಿ ಸಾಗಿ ಹಣಗೆರೆಯಲ್ಲಿ ಮುಕ್ತಾಯ ಕಂಡಿತು. ಈ ಸಂದರ್ಭದಲ್ಲಿ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ, ಡಿಸಿಎಫ್ ಜಿ. ಲೋಹಿತ್, ನೋಡಲ್ ಅಧಿಕಾರಿ ಬಾಬು ಕೆ. ಸೇರಿದಂತೆ ಅರಣ್ಯ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. 

ಸಾರ್ವಜನಿಕರು, ಹಿರಿಯ ನಾಗರಿಕರು, ಸೈಕ್ಲಿಸ್ಟ್‌ಗಳು ಹಾಗೂ ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸೈಕಲ್ ತುಳಿಯುವ ಮೂಲಕ ವನ್ಯಜೀವಿಗಳ ಸ್ವಚ್ಛಂದ ಸಂಚಾರಕ್ಕೆ ರಸ್ತೆಗಳಲ್ಲಿ ಅವಕಾಶ ಕಲ್ಪಿಸುವ ಸಂದೇಶ ಸಾರಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!CJP ಪ್ರತಿಭಟನೆ: 3,000ಕ್ಕೂ ಹೆಚ್ಚು ಜನರ ಬಂಧನ; ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಎಂದ ಸೋನಮ್ ವಾಂಗ್ ಚುಕ್