ಧಾರವಾಡ : ಧಾರವಾಡ ಜಿಲ್ಲೆ ಜಿಲ್ಲಾಧಿಕಾರಿಗಳವರ ನಿರ್ದೇಶನದ ಮೇರೆಗೆ ಖಾದಿ ಬಟ್ಟೆಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಮಳಿಗೆ ತೆರೆಯಲು ಅವಕಾಶ ನೀಡಿದ್ದು, ಆಗಸ್ಟ್ 6 ಮತ್ತು 7, 2026 ರಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಖಾದಿ ಬಟ್ಟೆಗಳ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ.
ಈ ಮಾರಾಟ ಮಳಿಗೆಗಳು ಧಾರವಾಡ ಜಿಲ್ಲೆಯ ಅಧಿಕೃತ ಸಂಘ-ಸಂಸ್ಥೆಗಳಾದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಫೆ), ಬೆಂಗೇರಿ-ಹುಬ್ಬಳ್ಳಿ ಹಾಗೂ ಧಾರವಾಡ ತಾಲೂಕು ಗರಗ ಕ್ಷೇತ್ರೀಯ ಸೇವಾ ಸಂಘ, ಗರಗ ವತಿಯಿಂದ ಎರಡು ದಿನಗಳ ಕಾಲ ವಿವಿಧ ಬಗೆಯ ಗುಣಮಟ್ಟದ ಹಾಗೂ ವೈವಿಧ್ಯಮಯ ಖಾದಿ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತದೆ.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತಾತ್ಕಾಲಿಕ ಮಳಿಗೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ವಿವಿಧ ಇಲಾಖೆಗಳ ಎಲ್ಲಾ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಖಾದಿ ಮಾರಾಟ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ಧಾರವಾಡ : ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಆಹಾರಧಾನ್ಯಗಳನ್ನು ಪೂರೈಸುತ್ತಿದ್ದು, ಅದರಂತೆ ಅಗಸ್ಟ-2026 ನೇ ಮಾಹೆಯಲ್ಲಿ ಅಗಸ್ಟ-2026 ಹಾಗೂ ಸಪ್ಟಂಬರ-2026 ನೇ ಈ ಎರಡು ಮಾಹೆಗಳಿಗೆ ಸಂಬಂಧಿಸಿದಂತೆ, ಜಿಲ್ಲೆಯ ಅಂತ್ಯೋದಯ ಪಡಿತರ ಚೀಟಿ (ಪ್ರತಿ ಕಾರ್ಡಿಗೆ) 28 ಕೆಜಿ ಅಕ್ಕಿ ಮತ್ತು 42 ಕೆಜಿ ಜೋಳ ಒಟ್ಟು 70 ಕೆಜಿ ಆಹಾರಧಾನ್ಯ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಕೇಂದ್ರ ವರ್ಗದಡಿಯ ಪಡಿತರ ಕಾರ್ಡುಗಳಿಗೆ 4 ಕೆಜಿ ಅಕ್ಕಿ ಮತ್ತು 6 ಕೆಜಿ ಜೋಳ ಒಟ್ಟು 10 ಕೆಜಿ ಆಹಾರಧಾನ್ಯ ಹಾಗೂ ರಾಜ್ಯ ಆದತ್ಯಾ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಪಡಿತರ ಆಹಾರಧಾನ್ಯವನ್ನು ವಿತರಣೆ ಮಾಡಲಾಗುತ್ತದೆ. ಹಾಗೆಯೇ ರಾಜ್ಯ ಸರ್ಕಾರವು ತನ್ನ ಪಾಲಿನ ಎರಡು ತಿಂಗಳ ಅಕ್ಕಿಯನ್ನು ಸಪ್ಟಂಬರ-2026 ನೇ ಮಾಹೆಯಲ್ಲಿ ನೀಡಲಾಗುವುದು.
ಪ್ರಸ್ತುತ ಅಗಸ್ಟ-2026 ನೇ ಮಾಹೆಯಲ್ಲಿ ಕೇಂದ್ರ ವ್ಯಾಪ್ತಿ ಅಂದರೆ ಎನ್‍ಎಫ್‍ಎಸ್‍ಎ ವರ್ಗದಡಿ ಅಗಸ್ಟ ಮತ್ತು ಸಪ್ಟಂಬರ-2026 ಎರಡೂ ಮಾಹೆಗಳ ಪಡಿತರ ಆಹಾರಧಾನ್ಯವನ್ನು ವಿತರಿಸಲಾಗುತ್ತಿದ್ದು, ಎಲ್ಲ ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಎರಡೂ ಮಾಹೆಗಳಿಗೆ ಸಂಬಂಧಿಸಿದಂತೆ ಮಾಹೆವಾರು ಪ್ರತ್ಯೇಕವಾಗಿ ಬೆರಳಚ್ಚು ನೀಡಿ ಉಚಿತವಾಗಿ ಪಡಿತರವನ್ನು ಪಡೆಯಬೇಕು. ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ 1967 ಸಹಾಯವಾಣಿ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.