ಬೆಳಗಾವಿ: ಬೆಳಗಾವಿ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ಉದ್ಯಮಬಾಗದಲ್ಲಿ ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ಪೌರಕಾರ್ಮಿಕರು ಕಸ ವಿಲೇವಾರಿ ಮಾಡುತ್ತಿದ್ದ ವೇಳೆ ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಸಿಕ್ಕಿವೆ. ಪೌರಕಾರ್ಮಿಕರು ಎಂದಿನಂತೆ ಉದ್ಯಮಬಾಗದ ರಸ್ತೆಯ ಬದಿಯಲ್ಲಿ ಸಂಗ್ರಹವಾದ ಕಸವನ್ನು ವಿಂಗಡನೆ ಮಾಡುತ್ತಿದ್ದ ವೇಳೆ ಈ ಜೀವಂತ ಗುಂಡುಗಳು ಪತ್ತೆಯಾಗಿವೆ. ತಕ್ಷಣವೇ ಉದ್ಯಮಬಾಗ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಮಹಾಂತೇಶ ಹೊಸಪೇಟೆ ಮತ್ತು ಅವರ ತಂಡವು ಪರಿಶೀಲನೆ ನಡೆಸಿದೆ. ಒಟ್ಟು 59 ಗುಂಡುಗಳು ಇದ್ದು, ಆ ಪೈಕಿ 41 ಒಂದು ಮಾದರಿ, 18 ಮತ್ತೊಂದು ಮಾದರಿಯ ಗುಂಡುಗಳಾಗಿವೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸ್ಥಳದಲ್ಲಿ ಮಹಜರು ನಡೆಸಿರುವ ಪೊಲೀಸರು, ಗುಂಡುಗಳನ್ನು ಜಪ್ತಿ ಮಾಡಿದ್ದಾರೆ. ಈ ಗುಂಡುಗಳು ಇಲ್ಲಿಗೆ ಹೇಗೆ ಬಂದವು..? ಇವುಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಡಿದವರು ಯಾರು? ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ.