ಬೆಂಗಳೂರು: ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 576 ವಾರ್ಡರ್ (ವೀಕ್ಷಕರು) ಹಾಗೂ ದ್ವಿತೀಯ ದರ್ಜೆ ಬೋಧಕರ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ
ಉಳಿಕೆ ಮೂಲ ವೃಂದದ 560 ವಾರ್ಡರ್ (ವೀಕ್ಷಕರು) ಮತ್ತು 16 ದ್ವಿತೀಯ ದರ್ಜೆ ಬೋಧಕರು (Instructor Grade-II) ಸೇರಿದಂತೆ ಒಟ್ಟು 576 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹37,500 ರಿಂದ ₹76,100 ರವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಅರ್ಹತೆ
ವಾರ್ಡರ್ (ವೀಕ್ಷಕರು): ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ದ್ವಿತೀಯ ದರ್ಜೆ ಬೋಧಕರು: ಎಸ್‌ಎಸ್‌ಎಲ್‌ಸಿ ಜೊತೆಗೆ ಸಂಬಂಧಪಟ್ಟ ವೃತ್ತಿಯಲ್ಲಿ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಾರ್ಪೆಂಟ್ರಿ, ಟೈಲರಿಂಗ್, ಟೆಕ್ಸ್‌ಟೈಲ್/ವೀವಿಂಗ್, ಕಾರ್ಪೆಟ್ ಮೇಕಿಂಗ್ ಇತ್ಯಾದಿ) ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ ವಿವರ
ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಪೂರೈಸಿರಬೇಕು. ಸರ್ಕಾರದ ನಿಯಮಾವಳಿಗಳ ಸಡಿಲಿಕೆಯ ಅನ್ವಯ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 31 ವರ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 33 ವರ್ಷ ಎಂದು ನಿಗದಿಪಡಿಸಲಾಗಿದೆ. ಮಾಜಿ ಸೈನಿಕರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ರಿಯಾಯಿತಿ ಇರಲಿದೆ.
ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು
ಸಾಮಾನ್ಯ ಅರ್ಹತೆ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹750 ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 19.09.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.10.2026
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16.10.2026
ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ದಿನಾಂಕ: 21.11.2026 (ಮಧ್ಯಾಹ್ನ 3:00 ರಿಂದ 4:30 ರವರೆಗೆ)
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳಿಗೆ ಮೊದಲಿಗೆ 100 ಅಂಕಗಳ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ (ಆಫ್‌ಲೈನ್ ಒಎಂಆರ್ ಮಾದರಿ) ನಡೆಯಲಿದ್ದು, ತಪ್ಪು ಉತ್ತರಗಳಿಗೆ 0.25 ಋಣಾತ್ಮಕ ಅಂಕಗಳಿರುತ್ತವೆ. ಲಿಖಿತ ಪರೀಕ್ಷೆ ಹಾಗೂ ವಿದ್ಯಾರ್ಹತೆ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ (ET & PST) ನಡೆಸಲಾಗುತ್ತದೆ. ಅಂತಿಮವಾಗಿ 1:2 ಅನುಪಾತದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮೆರಿಟ್ ಹಾಗೂ ಮೀಸಲಾತಿ ಅನ್ವಯ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆಸಕ್ತರು ಪ್ರಾಧಿಕಾರದ ಅಧಿಕೃತ ಜಾಲತಾಣವಾದ cetonline.karnataka.gov.in/kea ಮೂಲಕ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.













