ಅನಂತಪುರ/ತುಮಕೂರು: ಕರ್ನಾಟಕ ಹಾಗೂ ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿ ಕನ್ನ ಹಾಕುತ್ತಿದ್ದ ಕುಖ್ಯಾತ ಮೂವರು ಅಂತಾರಾಜ್ಯ ಕಳ್ಳರ ಗ್ಯಾಂಗ್ ಅನ್ನು ಆಂಧ್ರದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗಂ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹40 ಲಕ್ಷ ಮೌಲ್ಯದ 21 ಕೆ.ಜಿ ತೂಕದ ಬೆಳ್ಳಿ ಒಡವೆಗಳು, ಕರಗಿಸಿದ ಬೆಳ್ಳಿಯ ಗಟ್ಟಿಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿವರ
ಸೆರೆಯಾದವರನ್ನು ಅನಂತಪುರದ ನಂದಮೂರಿ ನಗರದ ಕುರಪಾಟಿ ಸಾಯಿ ಕುಮಾರ್ (27), ಅನಂತಪುರ ಗ್ರಾಮೀಣ ವ್ಯಾಪ್ತಿಯ ಅಕ್ಕಂಪಳ್ಳಿಯ ಕನಮುಕ್ಕಲ ಚಾಂದ್ ಬಾಷಾ (29) ಮತ್ತು ಶ್ರೀ ಸತ್ಯಸಾಯಿ ಜಿಲ್ಲೆ ಪರ್ಗಿ ಮಂಡಲದ ಕೊಡಿಗೇನಹಳ್ಳಿ ನಿವಾಸಿ ಗುಂಡಪ್ಪಗಾರಿ ಸೂದಂ (32) ಎಂದು ಗುರುತಿಸಲಾಗಿದೆ.
ಕೊರಟಗೆರೆ, ಕ್ಯಾತಸಂದ್ರ ಸೇರಿದಂತೆ 9 ಕಡೆ ಕೈಚಳಕ
ಬಂಧಿತರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಐತಿಹಾಸಿಕ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಾಲಯ ಹಾಗೂ ತುಮಕೂರು ನಗರ ಸಮೀಪದ ಕ್ಯಾತಸಂದ್ರದ ದೇವಸ್ಥಾನವೊಂದರಲ್ಲಿ ಕನ್ನ ಹಾಕಿರುವುದನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ಎರಡು ರಾಜ್ಯಗಳ ವ್ಯಾಪ್ತಿಯಲ್ಲಿ ನಡೆದಿದ್ದ ಬರೋಬ್ಬರಿ 9 ದೇಗುಲ ಕಳವು ಪ್ರಕರಣಗಳು ಇತ್ಯರ್ಥಗೊಂಡಿವೆ. ಆರೋಪಿಗಳ ಮೇಲೆ ಈಗಾಗಲೇ 6 ಹಳೆಯ ಕೇಸುಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಹೈಟೆಕ್ ಕಳ್ಳತನದ ಶೈಲಿ
ಬೀಗ ಹಾಕಿರುವ ದೇವಸ್ಥಾನಗಳನ್ನೇ ಹಗಲಿನಲ್ಲಿ ಗುರುತು ಹಾಕಿಕೊಳ್ಳುತ್ತಿದ್ದ ಈ ಗ್ಯಾಂಗ್, ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಕೃತ್ಯಕ್ಕೆ ಇಳಿಯುತ್ತಿತ್ತು. ಪೊಲೀಸರಿಗೆ ಸುಳಿವು ಸಿಗದಂತೆ ಸಿಸಿಟಿವಿ ಕ್ಯಾಮೆರಾಗಳ ಲೆನ್ಸ್‌ಗೆ ಸ್ಪ್ರೇ ಹೊಡೆದು ಮಸುಕುಗೊಳಿಸುವುದು ಅಥವಾ ಡಿವಿಆರ್ ಬಾಕ್ಸ್‌ಗಳನ್ನೇ ಎಗರಿಸುವುದು ಇವರ ಖತರ್ನಾಕ್ ತಂತ್ರವಾಗಿತ್ತು. ಗರ್ಭಗುಡಿಯ ದೇವರ ವಿಗ್ರಹಗಳಲ್ಲಿದ್ದ ಬೆಳ್ಳಿ ಆಭರಣಗಳನ್ನು ದೋಚಿದ ಬಳಿಕ, ಯಾರ ಕೈಗೂ ಸಿಗದಂತೆ ಆಭರಣಗಳನ್ನು ಕರಗಿಸಿ ಗಟ್ಟಿಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದರು.
ಚೆಕ್‌ಪೋಸ್ಟ್ ಬಳಿ ಬಲೆ ಬೀಸಿದ ಖಾಕಿ
ಅನಂತಪುರ ಎಸ್ಪಿ ಪಿ. ಜಗದೀಶ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ ಕಲ್ಯಾಣದುರ್ಗಂ ಡಿಎಸ್ಪಿ ರವಿಬಾಬು ನೇತೃತ್ವದ ವಿಶೇಷ ತನಿಖಾ ಪಡೆ, ಖಚಿತ ಮಾಹಿತಿಯ ಮೇರೆಗೆ ಕಂಬದೂರು ಚೆಕ್‌ಪೋಸ್ಟ್ ಬಳಿ ನಾಕಾಬಂದಿ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಸಾರ್ವಜನಿಕರ ಧಾರ್ಮಿಕ ಭಾವನೆ ಮತ್ತು ಪವಿತ್ರ ಧಾರ್ಮಿಕ ಕೇಂದ್ರಗಳ ಭದ್ರತೆಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.