ಚಿತ್ರದುರ್ಗ: ರೈತನೋರ್ವನ ಜಮೀನಿನ ಪಹಣಿ ತಿದ್ದುಪಡಿ ಮಾಡಲು ಹಣಕ್ಕೆ ಬೇಡಿಕೆಯಿಟ್ಟು, ಕಚೇರಿಯಲ್ಲೇ ಹಣ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಚಿತ್ರದುರ್ಗದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಬಂಧಿತ ಎಫ್‌ಡಿಎ ಅಧಿಕಾರಿ. ಹೊಸದುರ್ಗ ತಾಲೂಕಿನ ಕೆಲ್ಲೋಡು ಮೂಲದ ಹನುಮಂತಪ್ಪ ಎಂಬುವವರು ತಮ್ಮ ಜಮೀನಿನ ಪಹಣಿ ತಿದ್ದುಪಡಿಗಾಗಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸವನ್ನು ಮಾಡಿಕೊಡಲು ಬಸವರಾಜ್ 40,000 ರೂಪಾಯಿ ಲಂಚ ಕೊಡುವಂತೆ ಒತ್ತಾಯಿಸಿದ್ದರು.
ಲಂಚ ನೀಡಲು ಇಷ್ಟವಿಲ್ಲದ ಹನುಮಂತಪ್ಪ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯಂತೆ ಮಂಗಳವಾರ ಕಚೇರಿಯಲ್ಲಿ ಹನುಮಂತಪ್ಪ ಅವರಿಂದ ಬಸವರಾಜ್ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಅವರನ್ನು ನಗದು ಸಹಿತ ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಕೌಲಾಪುರೆ ಹಾಗೂ ಡಿವೈಎಸ್ಪಿ ಕಲಾವತಿ ಅವರ ನೇತೃತ್ವದ ತಂಡ ಈ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಎಫ್‌ಡಿಎ ಬಸವರಾಜ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಪ್ರಸ್ತುತ ಅಧಿಕಾರಿಗಳು ಕಚೇರಿಯಲ್ಲಿದ್ದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.