ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಕುಂಸಿ, ಯಡೇಹಳ್ಳಿ ಸಮೀಪದಲ್ಲಿ ತಲಾ 60 ಕೋ.ರೂ. ಅಂದಾಜು ವೆಚ್ಚದಲ್ಲಿ, ಹೊಸೂರು, ತಾಳಗುಪ್ಪ ಮತ್ತು ನಗರದ ಬೊಮ್ಮನಕಟ್ಟೆ ಪ್ರದೇಶಗಳಲ್ಲಿ ತಲಾ 70ಕೋ.ರೂ.ಗಳ ಅಂದಾಜು ವೆಚ್ಚದಲ್ಲಿ ಹಾಗೂ ಗುಂಡಪ್ಪಶೆಡ್‌ನಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳನ್ನು ಪ್ರಾರಂಭಿಸಲು 300ಕೋ. ರೂ. ವೆಚ್ಚದ ಒಟ್ಟು 7 ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಅಗತ್ಯವಿರುವ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿವೆ ಎಂದು ಸಾಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಶಿವಮೊಗ್ಗದ ವಿದ್ಯಾನಗರದ ಮೇಲ್ಸೇತುವೆಗೆ ಹೊಂದಿಕೊಂಡಂತಿರುವ ರೈಲ್ವೇ ಇಲಾಖೆಯ ವಿಶಾಲವಾದ ಜಾಗದಲ್ಲಿ ವಿದ್ಯಾನಗರ, ಚಿಕ್ಕಲ್, ಶಾಂತಮ್ಮ ಲೇಔಟ್, ಅರಕೇಶ್ವರ ದೇವಸ್ತಾನ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಗಂಧದ ಕಾರ್ಖಾನೆಗಳಿಗೆ ಸಂಚರಿಸಲು ಲಘುವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು 3 ಕೋ. ರೂ.ಗಳ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಇದೇ ಸ್ತಳದಲ್ಲಿ ಈಗಾಗಲೇ 43.90ಕೋ. ವೆಚ್ಚದ ಟ್ರಂಪೆಟ್ ಕರ್ವ್ ಮೇಲ್ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದವರು ನುಡಿದರು.
ಆಡಳಿತಾರೂಢ ಕೇಂದ್ರ ಸರ್ಕಾರದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿಯವರ ಸಹಕಾರದೊಂದಿಗೆ ರಾಷ್ಟ್ರದ ಹೆದ್ದಾರಿಗಳು ಹಾಗೂ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ರವರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಹೊಸ ರೈಲು ಸಂಪರ್ಕಗಳ ಅಭಿವೃದ್ಧಿಯ ಪರ್ವವೇ ಆರಂಭಗೊಂಡಿದೆ ಎಂದ ಅವರು, ಅನೇಕ ವಿಶೇಷ ಪ್ರಯತ್ನಗಳ ಫಲವಾಗಿ ಈವರೆಗೆ ಸುಮಾರು 20ಸಾವಿರ ಕೋಟಿಗೂ ಅಧಿಕ ವೆಚ್ಚದ ಹೆದ್ದಾರಿ ಮತ್ತು ರೈಲ್ವೇ ಕಾಮಗಾರಿಗಳಿಗೆ ಅನುದಾನ ದೊರಕಿದ್ದು, ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದರು.
ಕ್ಷೇತ್ರದ ಹೆದ್ದಾರಿಗಳಲ್ಲಿರುವ ಎಲ್ಲಾ ರೈಲ್ವೇ ಗೇಟ್ ಲೆವೆಲ್ ಕ್ರಾಸಿಂಗ್ ಗಳ ಬದಲಾಗಿ ಮೇಲ್ಸೇತುವೆ ಮತ್ತು ಅಂಡರ್‌ಪಾಸ್ ಗಳನ್ನು ನಿರ್ಮಿಸಿ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ವಿಶೇಷ ಗಮನಹರಿಸಲಾಗಿದೆ. ಈಗಾಗಲೇ ಆರಂಭಿಸಲಾಗಿದ್ದ ವಿದ್ಯಾನಗರದ ವೃತ್ತಾಕಾರದ ಮೇಲ್ಸೇತುವೆ, ಸವಳಂಗರಸ್ತೆಯ ಮೇಲ್ಸೇತುವೆ ಮತ್ತು ಅಂಡರ್‌ಪಾಸ್, ಸೋಮಿನಕೊಪ್ಪ ರಸ್ತೆಯಲ್ಲಿ ಮೇಲ್ಸೇತುವೆ, ಪಿ.ಅಂಡ್‌ಟಿ.ಕಾಲೋನಿಯಲ್ಲಿ ಅಂಡರ್ ಪಾಸ್ ಮತ್ತು ಭದ್ರಾವತಿ ಸಮೀಪದ ಕಡದಕಟ್ಟೆ ಬಳಿ ಮೇಲ್ಸೇತುವೆ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿರುವುದು ಅತ್ಯಂತ ಹರ್ಷದ ಸಂಗತಿಯಾಗಿದೆ ಎಂದರು.
ಅಂತೆಯೇ ಎಂ.ಆರ್.ಎಸ್.ಸರ್ಕಲ್‌ನಿಂದ ರಿಂಗ್ ರೋಡ್ ನವರೆಗೆ ಒಂದು ಬಾರಿ ಅಭಿವೃಧ್ಧಿಗೊಳಿಸಿ ನಿರ್ವಹಿಸಲು ಹಾಗೂ ಎಂ.ಆರ್.ಎಸ್‌ನಿಂದ ಬಸ್ ನಿಲ್ದಾಣದವರೆಗೆ ಹಾಗೂ ನಗರದ ವಿವಿಧ 4ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಭಾರೀ ಮೊತ್ತದ ಬಿಡುಗಡೆಗೊಳಿಸಿ, ಅಭಿವೃದ್ದಿ ಕಾರ್ಯಕ್ಕೆ ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಹಾಗೂ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಅಭಿನಂದನಾರ್ಹರು ಎಂದರು.
ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿಯೇ ಸಂಸದ ಬಿ.ವೈ.ರಾಘವೇಂದ್ರ ಅವರು ಮುಂದುವರೆದು ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸುತ್ತಿರುವುದು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸುವಂತಹದ್ದು, ಅದಕ್ಕಾಗಿ ನಾನು ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಅಭಿನಂದಿಸುತ್ತೇನೆ. ನಿರೀಕ್ಷಿತ ಕೆಲಸ-ಕಾರ್ಯಗಳನ್ನು ನಿಗಧಿಪಡಿಸಿದ ಕಾಲಮಿತಿಯಲ್ಲಿ ನಡೆಸಿ, ಲೋಕಾರ್ಪಣೆಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ನಗರದ ವಿಕಾಸಕ್ಕೆ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿ, ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಶಿವಮೊಗ್ಗ ಬೃಹತ್‌ನಗರವಾಗಿ ಅಭಿವೃದ್ಧಿಗೊಂಡಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕೈಗೊಳ್ಳುತ್ತಿರುವ ರೈಲ್ವೇ ಅಂಡರ್‌ಪಾಸ್‌ಕಾಮಗಾರಿಯು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದಂತೆ ಹಾಗೂ ಮಳೆಗಾಲದಲ್ಲಿ ನೀರು ನಿಲ್ಲದಂತೆ ವಿನ್ಯಾಸಗೊಳಿಸಿ, ಲಘುವಾಹನಗಳು ಮತ್ತು ಪಾದಚಾರಿಗಳಿಗೆ ಅನುಕೂಲವಾಗುವಂತೆ ಕೆಳ ಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಈ ಭಾಗದ ನಿವಾಸಿಗಳಲ್ಲಿ ಸಂತಸ ಮನೆ ಮಾಡಿದೆ. ಈ ಭಾಗದ ಎಲ್ಲಾ ನಿವಾಸಿಗಳ ಕೋರಿಕೆಯನ್ನು ಆಲಿಸಿ, ಕಾಮಗಾರಿ ಕೈಗೊಳ್ಳುವಲ್ಲಿ ಸಹಕರಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ನಗರದ ನಾಗರೀಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಜಗದೀಶ್, ಯಮುನಾ ರಂಗೇಗೌಡ, ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಮೋಹನರೆಡ್ಡಿ ಸೇರಿದಂತೆ ಹಲವು ಗಣ್ಯರು ಹಾಗೂ ರೈಲ್ವೇ ಇಲಾಖಾ ಅಧಿಕಾರಿ-ಸಿಬ್ಬಂಧಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.