ಬೆಂಗಳೂರು: ರಾಜಧಾನಿಯಲ್ಲಿ ಸಕ್ರಿಯವಾಗಿದ್ದ ನಕಲಿ ಔಷಧ ಮಾರಾಟ ಜಾಲದ ಬೆನ್ನುಬಿದ್ದಿರುವ ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು, ಜಾಲದ ಸಂಪರ್ಕದಲ್ಲಿದ್ದ ಮೂರು ಪ್ರಮುಖ ಫಾರ್ಮಾ ಕಂಪನಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ನಕಲಿ ಔಷಧ ಕಾರ್ಯಾಚರಣೆ ಸಂಬಂಧ ತನಿಖೆ ತೀವ್ರಗೊಳಿಸಿರುವ ಎಸ್‌ಐಟಿ, ಕಳೆದ ಎರಡು ದಿನಗಳ ಹಿಂದೆ ಈ ಕಾರ್ಯಾಚರಣೆ ನಡೆಸಿ ನಕಲಿ ಔಷಧಗಳು ಹಾಗೂ ಹಲವು ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿದೆ.
ದಾಳಿಗೊಳಗಾದ ಕಂಪನಿಗಳನ್ನು ರಾಜರಾಜೇಶ್ವರಿ ನಗರದ 'ರಾಜೇಶ್ವರಿ ಫಾರ್ಮಾ', ಚಾಮರಾಜಪೇಟೆಯ 'ಮೆಡಿ-365 ಎಲ್‌ಎಲ್‌ಪಿ' ಹಾಗೂ ತಲಘಟ್ಟಪುರದ 'ಪಾಟೀಲ್ ಫಾರ್ಮಾ' ಎಂದು ಗುರುತಿಸಲಾಗಿದೆ. ಈ ಹಿಂದೆ ಬಂಧನಕ್ಕೊಳಗಾಗಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್‌ಪಿನ್ ಪ್ರಶಾಂತ್, ವಿಚಾರಣೆ ವೇಳೆ ನೀಡಿರುವ ಮಹತ್ವದ ಸುಳಿವುಗಳ ಆಧಾರದ ಮೇಲೆ ಈ ದಾಳಿ ನಡೆದಿದೆ. ಪ್ರಶಾಂತ್ ಕಳೆದ ಹಲವು ವರ್ಷಗಳಿಂದ ಈ ಮೂರೂ ಕಂಪನಿಗಳೊಂದಿಗೆ ನಿರಂತರ ವ್ಯವಹಾರ ಸಂಬಂಧ ಹೊಂದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳನ್ನು ಪೂರೈಸಿರುವುದು ಎಸ್‌ಐಟಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಸ್ತುತ ಎಸ್‌ಐಟಿ ಅಧಿಕಾರಿಗಳು ಕಂಪನಿಗಳ ಗೋದಾಮಿನಲ್ಲಿದ್ದ ಸರಕುಗಳನ್ನು ಹಾಗೂ ವಶಪಡಿಸಿಕೊಂಡ ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಈ ಕಂಪನಿಗಳ ಮೂಲಕ ಎಷ್ಟು ಪ್ರಮಾಣದ ನಕಲಿ ಔಷಧಗಳು ಮಾರುಕಟ್ಟೆಗೆ ಸರಬರಾಜಾಗಿವೆ ಮತ್ತು ಎಷ್ಟು ಕೋಟಿ ರೂಪಾಯಿಗಳ ಅಕ್ರಮ ವಹಿವಾಟು ನಡೆದಿದೆ ಎಂಬ ಪೂರ್ಣ ವಿವರಗಳನ್ನು ಅಧಿಕಾರಿಗಳು ಪರಿಶೀಲನೆ ನಂತರ ಸ್ಪಷ್ಟಪಡಿಸಲಿದ್ದಾರೆ.