ಶಿವಮೊಗ್ಗ: ಗ್ರಾಮೀಣ ಉದ್ಯಮಗಳು, ಗುಡಿ ಕೈಗಾರಿಕೆಗಳು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಹಾಗೂ ವಿಶ್ವಾಸಾರ್ಹತೆ ಮೂಡಿಸುವ ಸದುದ್ದೇಶದಿಂದ ಸಾಗರ ತಾಲೂಕಿನ ಹೆಗ್ಗೋಡಿನ ಪ್ರಸಿದ್ಧ ‘ಚರಕ’ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ‘ಗಾಂಧಿ ಸಂತೆ 2026’ ಹಾಗೂ ‘ಕೊಡು–ಕೊಳ್ಳುವವರ ಸಮಾವೇಶ’ವನ್ನು ಆಯೋಜಿಸಲಾಗಿದೆ ಎಂದು ಚರಕ ಸಂಸ್ಥೆಯ ಕಾರ್ಯಾಧ್ಯಕ್ಷೆ ಪದ್ಮಶ್ರೀ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೇಸರದಲ್ಲಿನ ಶ್ರಮಜೀವಿ ಆಶ್ರಮದ ಚರಕ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ಕವಿ-ಕಾವ್ಯ ಟ್ರಸ್ಟ್, ದೇಸಿ ಟ್ರಸ್ಟ್, ಜೀವನ್ಮುಖಿ ಸಾಗರ ಹಾಗೂ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸೆಪ್ಟೆಂಬರ್.26, 27ರಂದು ಹೊನ್ನೇಸರದ ಚರಕ ಶ್ರಮಜೀವಿ ಆಶ್ರಮದಲ್ಲಿ ಗಾಂಧಿ ಸಂತೆ-2026ರ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಉದ್ಯಮ ಮತ್ತು ಗ್ರಾಹಕರ ನಡುವೆ ಸೇತುವೆ
ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗಳು ಮತ್ತು ಸ್ವಸಹಾಯ ಸಂಘಗಳು ಒಂದೆಡೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಾ ಸೂಕ್ತ ಮಾರುಕಟ್ಟೆಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿರುತ್ತವೆ. ಮತ್ತೊಂದೆಡೆ, ರಾಸಾಯನಿಕ ಮುಕ್ತ ಹಾಗೂ ಶುದ್ಧ ನೈಸರ್ಗಿಕ ಉತ್ಪನ್ನಗಳನ್ನು ಬಯಸುವ ಗ್ರಾಹಕರಿಗೆ ಅವು ಎಲ್ಲಿ ಸಿಗುತ್ತವೆ ಎಂಬ ಸರಿಯಾದ ಮಾಹಿತಿ ಇರುವುದಿಲ್ಲ. ಈ ಇಬ್ಬರ ನಡುವೆ ಒಂದು ಗಟ್ಟಿಯಾದ ಸಂಪರ್ಕ ಸೇತುವೆಯನ್ನು ನಿರ್ಮಿಸುವುದೇ ಗಾಂಧಿ ಸಂತೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಉತ್ಪನ್ನಗಳ ನೈಜತೆಯ ಪ್ರತ್ಯಕ್ಷ ಪರೀಕ್ಷೆಗೆ ಮುಕ್ತ ವೇದಿಕೆ
ಇದುವರೆಗೂ ಸಂಸ್ಥೆಯ ವತಿಯಿಂದಲೇ ವಿವಿಧ ಊರುಗಳ ಪ್ರದರ್ಶನ ಮಳಿಗೆಗಳ ಮೂಲಕ ಗ್ರಾಹಕರ ಬಳಿಗೆ ತೆರಳಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕೈಮಗ್ಗ ಮತ್ತು ನೈಸರ್ಗಿಕ ಬಣ್ಣಗಾರಿಕೆಯ ಹೆಸರಿನಲ್ಲಿ ರಾಸಾಯನಿಕಯುಕ್ತ, ಅಗ್ಗದ ನಕಲಿ ಉತ್ಪನ್ನಗಳು ವ್ಯಾಪಕವಾಗಿ ಲಭ್ಯವಿವೆ. ಇದರಿಂದಾಗಿ ಗ್ರಾಹಕರು ಹಾಗೂ ಸಗಟು ವ್ಯಾಪಾರಿಗಳಲ್ಲಿ "ಇದು ನಿಜವಾಗಿಯೂ ಕೈಮಗ್ಗವೇ? ನೈಸರ್ಗಿಕ ಬಣ್ಣಗಳನ್ನೇ ಬಳಸಲಾಗಿದೆಯೇ?" ಎಂಬ ಗೊಂದಲಗಳು ಮತ್ತು ಪ್ರಶ್ನೆಗಳು ಮೂಡುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರು, ಸಗಟು ಖರೀದಿದಾರರು ಮತ್ತು ಮಾಧ್ಯಮದವರನ್ನು ನೇರವಾಗಿ ಹೆಗ್ಗೋಡಿನ ಚರಕ ಆವರಣಕ್ಕೇ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಇಲ್ಲಿ ನೇಯ್ಗೆ ಹಾಗೂ ಗಿಡಮೂಲಿಕೆಗಳ ನೈಸರ್ಗಿಕ ಬಣ್ಣ ಹಾಕುವ ಸಂಪೂರ್ಣ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ, ಗುಣಮಟ್ಟವನ್ನು ಖಚಿತಪಡಿಸಿಕೊಂಡು ಖರೀದಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಗಾಂಧಿ ಸಂತೆಯನ್ನು ಮುಂದಿನ ದಿನಗಳಲ್ಲಿ ಪ್ರತಿ ಹುಣ್ಣಿಮೆ ಅಥವಾ ಪ್ರತಿ ತಿಂಗಳು ಆಯೋಜಿಸುವ ದೂರದೃಷ್ಟಿಯ ಯೋಚನೆಯೂ ಸಂಸ್ಥೆಗಿದೆ ಎಂದು ಹೇಳಿದರು.
ಸಾವಯವ ಕೃಷಿಕರು ಹಾಗೂ ಮಹಿಳಾ ಸಂಘಟನೆಗಳ ಒಡನಾಟ
ಈ ಸಂತೆಯಲ್ಲಿ ಕೇವಲ ಚರಕದ ಬಟ್ಟೆಗಳಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳ ನೈಜ ಗುಡಿ ಕೈಗಾರಿಕೆಗಳು, ಸಾವಯವ ಕೃಷಿಕರು ಹಾಗೂ ಮಹಿಳಾ ಸಂಘಟನೆಗಳಿಗೆ ಮಳಿಗೆಗಳನ್ನು ಒದಗಿಸಲಾಗಿದೆ. ‘ನಮ್ಮದು’ ಸಂಸ್ಥೆ, ‘ಜಾಗೃತಿ ಮಹಿಳಾ ಒಕ್ಕೂಟ’, ‘ಭುವನೇಶ್ವರಿ ಮಹಿಳಾ ಒಕ್ಕೂಟ’ ಸೇರಿದಂತೆ ಹಲವು ಸಂಘಟನೆಗಳು ಹಾಗೂ ಕೃಷಿಕರು ತಮ್ಮ ರಾಸಾಯನಿಕ ಮುಕ್ತ, ನೈಸರ್ಗಿಕ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಿ ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೊಡು–ಕೊಳ್ಳುವವರ ವಿಶೇಷ ಸಮಾವೇಶ
ಗ್ರಾಮೀಣ ಕಾಯಕಕ್ಕೆ ವ್ಯಾಪಕ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಸಗಟು ಖರೀದಿದಾರರು, ಸೂಪರ್ ಮಾರ್ಕೆಟ್ ಪ್ರತಿನಿಧಿಗಳು ಹಾಗೂ ವಸ್ತ್ರ ವಿನ್ಯಾಸಕಾರರಿಗಾಗಿ ವಿಶೇಷ ‘ಕೊಡು–ಕೊಳ್ಳುವವರ ಸಮಾವೇಶ’ (ಬೈಯರ್-ಸೆಲ್ಲರ್ ಮೀಟ್) ನಡೆಯಲಿದೆ. ಈಗಾಗಲೇ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿರುವ ವಿನ್ಯಾಸಕಾರರ ಜೊತೆಗೆ ಹೊಸ ವಿನ್ಯಾಸಕಾರರನ್ನು ಆಹ್ವಾನಿಸಿ, ಇಲ್ಲಿನ ಪರಿಸರಸ್ನೇಹಿ ಉತ್ಪಾದನಾ ವಿಧಾನಗಳನ್ನು ಪರಿಚಯಿಸಿ ನೇರ ವ್ಯಾಪಾರ ಒಪ್ಪಂದಗಳಿಗೆ ಹಾದಿ ಮಾಡಿಕೊಡಲಾಗುತ್ತಿದೆ ಎಂದರು.
ಕೆರೆ ಅಭಿವೃದ್ಧಿ ಹಾಗೂ ಮಲ್ನಾಡಿನ ವಸ್ತು ಸಂಗ್ರಹಾಲಯ ನಿರ್ಮಾಣ
ಚರಕ ಸಂಸ್ಥೆಯು ಕೇವಲ ಬಟ್ಟೆ ಉತ್ಪಾದನೆಗೆ ಸೀಮಿತವಾಗಿರದೆ ಪರಿಸರ ಮತ್ತು ಸಾಮಾಜಿಕ ಕಳಕಳಿಯನ್ನೂ ಮುನ್ನಡೆಸಿಕೊಂಡು ಬಂದಿದೆ. ಇದರ ಅಂಗವಾಗಿ ಚರಕ ಸಂಸ್ಥೆಯ ಸಮೀಪದ ಕೆರೆಯ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮವಾಗಿದೆ. ಇದೇ ಸಂದರ್ಭದಲ್ಲಿ ಮಲೆನಾಡಿನ ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸುವ ‘ಮಲ್ನಾಡಿನ ವಸ್ತು ಸಂಗ್ರಹಾಲಯ’ ಹಾಗೂ ‘ಕನ್ನಡ ಪರ್ವ’ ಎಂಬ ಪುಟ್ಟ ಮಂದಿರದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಹೇಳಿದರು.
ಉದ್ಘಾಟನೆ ಮತ್ತು ಅತಿಥಿಗಳ ಉಪಸ್ಥಿತಿ
ಸೆಪ್ಟೆಂಬರ್.26ರಂದು ಸಂಜೆ 4.30ಕ್ಕೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಗಾಂಧಿ ಸಂತೆಯನ್ನು ಉದ್ಘಾಟಿಸಲಿದ್ದಾರೆ. ಗಾಂಧಿವಾದಿ ಹಾಗೂ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ವಸ್ತು ಸಂಗ್ರಹಾಲಯ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ವಿರೂಪಾಕ್ಷನ ಜಡ್ಡು ಕೆರೆ ಅಂಗಳದಲ್ಲಿ ನಿರ್ಮಿಸಿರುವಂತ ಗಂಗಾತಟವನ್ನು ಉದ್ಘಾಟಿಸುವರು. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕೊಡುಕೊಳ್ಳುವವರ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾಗರ ತಹಶೀಲ್ದಾರ್ ಡಾ.ಆರ್.ಪ್ರತಿಭಾ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ
ಗ್ರಾಮೀಣ ಮಹಿಳೆಯರ ಮತ್ತು ಪರಿಸರದ ಸಾಂಸ್ಕೃತಿಕ ವಿಕಾಸದ ಭಾಗವಾಗಿ ವಿಶೇಷ ಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 26 ರಂದು ವಿದುಷಿ ವಸುಧಾ ಶರ್ಮಾ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಲಘು ಸಂಗೀತ ಕಾರ್ಯಕ್ರಮ ಇರಲಿದೆ. ಆ ಬಳಿಕ ಚರಕದ ಶ್ರಮಜೀವಿಗಳಿಂದ ಫ್ಯಾಷನ್ ಶೋ ಕೂಡ ಆಯೋಜಿಸಲಾಗಿದೆ. ಸೆಪ್ಟೆಂಬರ್ 27 ರಂದು ವಿದ್ಯಾ ವೆಂಕಟೇಶ್, ನಂಜುಂಡಸ್ವಾಮಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಸಂಜೆ.5ರಿಂದ 6ರವರೆಗೆ ಕುಗ್ವೆಯ ಜಾನಪದ ಡೊಳ್ಳು ತಂಡದಿಂದ ಡೊಳ್ಳು ಕುಣಿತ ಕಣ್ಮನ ಸೆಳೆಯಲಿದೆ. ಸಂಜೆ 6 ರಿಂದ 7.30ರವರೆಗೆ ತ್ರಿಷ ಸಾಗರ ತಂಡದಿಂದ ಲಘು ಸಂಘೀತ ಕಾರ್ಯಕ್ರಮ ಇರಲಿದೆ ಎಂದರು.
ಸೆಪ್ಟೆಂಬರ್.26ರ ಮಧ್ಯಾಹ್ನದಿಂದ ದೇಸೀಯ ಉತ್ಪನ್ನಗಳ ಮಾರಾಟ ಆರಂಭಗೊಳ್ಳಲಿದೆ. ಸೆ.27ರಂದು ಬೆಳಗ್ಗೆ 10.30ರಿಂದ ರಾತ್ರಿ 8ರವರೆಗೆ ಮಾರಾಟವಿರಲಿದೆ. ಅಂದು ಬೆಳಗ್ಗೆ ಪ್ರಕೃತಿ ನಡಿಗೆ ಹಾಗೂ ಶ್ರಮದಾನ ನಡೆಯಲಿದೆ. ಸಾರ್ವಜನಿಕರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮೀಣ ಸ್ವಾವಲಂಬಿ ಕಾಯಕಕ್ಕೆ ಬೆಂಬಲ ನೀಡಬೇಕೆಂದು ಚರಕ ಕಾರ್ಯಾಧ್ಯಕ್ಷೆ ಪದ್ಮಶ್ರೀ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..