ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (GBA) ನಗರದ ನಾಗರಿಕರಿಗೆ ಆಸ್ತಿ ಖಾತಾ ಸೇವೆಗಳನ್ನು ಮತ್ತಷ್ಟು ಸರಳ, ವೇಗ ಹಾಗೂ ಪಾರದರ್ಶಕಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ನೂತನ 'ಇ-ಆಸ್ತಿ 2.0' ಹಾಗೂ ಹೊಸ ಜಿಬಿಎ ಇ-ಖಾತಾ ವ್ಯವಸ್ಥೆಯನ್ನು ಸೆಪ್ಟೆಂಬರ್ 21, 2026 ರಿಂದ ಜಾರಿಗೆ ತರಲಾಗುತ್ತಿದೆ. ಈ ಹೊಸ ವ್ಯವಸ್ಥೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕ ಬಳಕೆಗೆ ಸಮರ್ಪಿಸಲಿದ್ದಾರೆ ಎಂದು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಈ ನೂತನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯು ನಾಗರಿಕ ಸ್ನೇಹಿಯಾಗಿದ್ದು, ಡಿಜಿಟಲ್ ಸೇವೆಗಳ ಮೂಲಕ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಸೇವೆ ತಲುಪಿಸುವ ಜಿಬಿಎಯ ಮಹತ್ವದ ಹೆಜ್ಜೆಯಾಗಿದೆ. ವಿಶೇಷವಾಗಿ ನಗರದ ಲಕ್ಷಾಂತರ ಆಸ್ತಿ ಮಾಲೀಕರು ಎದುರಿಸುತ್ತಿದ್ದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಪ್ರಕ್ರಿಯೆಯನ್ನು ಸಹ ಅತ್ಯಂತ ಸರಳೀಕರಣಗೊಳಿಸಲಾಗಿದೆ. ಹೊಸ ಇ-ಖಾತಾ 2.0 ವ್ಯವಸ್ಥೆಗೆ ಪರಿವರ್ತನೆಯಾಗುವ ಈ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಸಹಕಾರ ಮತ್ತು ಬೆಂಬಲ ನೀಡಬೇಕೆಂದು ಮುಖ್ಯ ಆಯುಕ್ತರು ಕೋರಿದ್ದಾರೆ.
ಸೆಪ್ಟೆಂಬರ್ 21 ರಿಂದ ಲಭ್ಯವಾಗುವ ಪ್ರಮುಖ ಸೇವೆಗಳು: ಪ್ರಾರಂಭಿಕ ಹಂತದಲ್ಲಿ ನಾಗರಿಕರು ಹಲವು ಪ್ರಮುಖ ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ.
-
ಡ್ರಾಫ್ಟ್ ಇ-ಖಾತಾವನ್ನು ಅಂತಿಮ ಇ-ಖಾತಾವಾಗಿ ಪರಿವರ್ತಿಸುವುದು.
-
ಮ್ಯೂಟೇಷನ್‌ನೊಂದಿಗೆ ಅಂತಿಮ ಇ-ಖಾತಾ ವಿತರಣೆ.
-
ಕಾವೇರಿ (KAVERI) ನೋಂದಣಿ ಮತ್ತು ಮ್ಯೂಟೇಷನ್ ಏಕೀಕರಣ.
-
ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಆನ್‌ಲೈನ್ ಮೂಲಕ ನೈಜ ಸಮಯದಲ್ಲಿ (Real-time) ಪರಿಶೀಲಿಸುವ ವ್ಯವಸ್ಥೆ.
-
ಬಿ-ಖಾತಾದಿಂದ ಎ-ಖಾತಾಗೆ ಸುಲಭ ಪರಿವರ್ತನೆ.
ಮುಂದಿನ ದಿನಗಳಲ್ಲಿ ವಿಸ್ತರಣೆಯಾಗಲಿರುವ ಸೇವೆಗಳು: ಇಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ನೂತನ ವ್ಯವಸ್ಥೆಯಡಿ ಮತ್ತಷ್ಟು ಆಧುನಿಕ ಸೇವೆಗಳನ್ನು ಸೇರ್ಪಡೆಗೊಳಿಸಲು ಜಿಬಿಎ ಯೋಜನೆ ರೂಪಿಸಿದೆ. ಹೊಸ ಖಾತಾ ನೋಂದಣಿ, ಅಪಾರ್ಟ್‌ಮೆಂಟ್‌ಗಳು ಹಾಗೂ ಬಹುಮಹಡಿ ಕಟ್ಟಡಗಳಿಗೆ ಬಲ್ಕ್ ಖಾತಾ ಪ್ರಕ್ರಿಯೆ, ಅಂತಿಮ ಇ-ಖಾತಾಗಳಲ್ಲಿ ಅಗತ್ಯ ತಿದ್ದುಪಡಿಗಳಿಗೆ ಅವಕಾಶ, ಮತ್ತು ನಿವೇಶನಗಳ ವಿಭಜನೆ (Bifurcation) ಹಾಗೂ ವಿಲೀನ (Amalgamation) ಸೇವೆಗಳು ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿವೆ.