ಮಂಡ್ಯ : ಗೌರಿ - ಗಣೇಶ ಹಬ್ಬದ ಅಂಗವಾಗಿ ಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 203 ಮಂದಿ ಗರ್ಭಿಣಿಯರಿಗೆ ಬಾಗೀನ ಅರ್ಪಣೆ ಮಾಡಲಾಯಿತು.
ಮದ್ದೂರು ನಗರದ ಕ್ರೀಡಾಂಗಣದಲ್ಲಿ ಒಂದು ವಾರಗಳ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಗೌರಿ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಬಳಿಕ, ವಿನುತಾ ಉದಯ್ ಮಾತನಾಡಿ, ಬಾಣಂತಿಯರಿಗೆ ಬಾಗೀನ ನೀಡುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಹಾಗೂ ಮಹತ್ವದ ಆಚರಣೆಯಾಗಿದೆ. ಹೆರಿಗೆಯಾದ ನಂತರ ತಾಯಿ ಮತ್ತು ಮಗುವಿನ ಆರೋಗ್ಯ, ಸಮೃದ್ಧಿ ಹಾಗೂ ದೀರ್ಘಾಯುಷ್ಯವನ್ನು ಹಾರೈಸಲು ಬಾಗೀನ ನೀಡುವುದು ವಾಡಿಕೆಯಾಗಿದೆ. ಗೌರಿ ಹಬ್ಬ, ವರಮಹಾಲಕ್ಷ್ಮಿ ವ್ರತ ಅಥವಾ ಮನೆಗೆ ಮಗು ಜನಿಸಿದ ವಿಶೇಷ ಸಂದರ್ಭಗಳಲ್ಲಿ ಬಾಣಂತಿಯರಿಗೆ ಬಾಗೀನವನ್ನು ಅರ್ಪಿಸಲಾಗುತ್ತದೆ. ಹೀಗಾಗಿ ತಾಲೂಕಿನ 203 ಮಂದಿ ಗರ್ಭಿಣಿಯರಿಗೆ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಬಾಗೀನ ನೀಡಲಾಗುತ್ತಿದೆ ಎಂದರು.
ಈಗಾಗಲೇ ಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಉತ್ತಮ ರಾಸುಗಳಿಗೆ ಪ್ರಶಸ್ತಿ, ಗಣೇಶ ಪ್ರತಿಷ್ಠಾಪನೆ, ಪ್ರತಿ ವರ್ಷ ಶಾಲಾ ಮಕ್ಕಳಿಗೆ ಪರಿಕರಗಳು, ಶಾಲಾ ಶುಲ್ಕ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸೇವೆಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲೂ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಟ್ರಸ್ಟ್ ನಿರ್ದೇಶಕರಾದ ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿ, ವಿಜಯ್ ಕುಮಾರ್, ಮಹೇಶ್, ಮಮತಾ ಶಂಕರೇಗೌಡ, ರಾಮಚಂದ್ರು ಮತ್ತಿತರರು ಇದ್ದರು.