ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ್ದರ ಅಂಗವಾಗಿ ಈಗಾಗಲೇ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಜೊತೆಗೆ ಇದೇ ಅಕ್ಟೋಬರ್ 1 ರಂದು ಬೂತ್ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಅವರು ಗುಜರಾತ್ ಮುಖ್ಯಮಂತ್ರಿಗಳಾಗಿ ಶುರು ಮಾಡಿದ ಸಾರ್ವಜನಿಕ ಸೇವೆ ಪ್ರಧಾನಿಗಳಾಗಿ ಮುಂದುವರಿದಿದೆ. ಇದಕ್ಕಾಗಿ ಒಂದು ತಿಂಗಳು ದೇಶದಾದ್ಯಂತ ಸೇವಾ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅಕ್ಟೋಬರ್ 1 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಪಕ್ಷದ ಇತರ ನಾಯಕರು ಕುರುಡುಮಲೆ ಶ್ರೀ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಬೂತ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸೇವಾ ಸಂಕಲ್ಪ ಅಭಿಯಾನದ ಚಟುವಟಿಕೆಗಳ ಜೊತೆಗೆ ಈ ಯಾತ್ರೆಯ ಚಟುವಟಿಕೆಗಳು ನಡೆಯಲಿವೆ. ನಮ್ಮ ಕಾರ್ಯಕರ್ತರು ಈ ಎರಡೂ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಜೊತೆಗೆ 2028 ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಮುನ್ನಡೆಸಲು ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ...
ಎಲ್ಲಾ ಚುನಾವಣಾ ಸವಾಲುಗಳಿಗೆ ತಯಾರು ಮಾಡುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಲಾಗುವುದು. ಬೂತ್ ಮಟ್ಟದ ವಿಚಾರಗಳನ್ನು ಇಟ್ಟುಕೊಂಡು ಈ ಬೂತ್ ವಿಜಯ ಸಂಕಲ್ಪ ಯಾತ್ರೆ ನಡೆಸಲಾಗುವುದು. ಹತ್ತನೇ ತಾರೀಕಿನವರೆಗೆ ಹದಿನಾರು ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಮುಂದಿನ ಮೂರು ತಿಂಗಳ ಒಳಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಗುವುದು. ಬಿಎಲ್‍ಎ ಹಾಗೂ ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಇತರ ಚುನಾವಣಾ ಪ್ರತಿನಿಧಿಗಳ ಸಲಹೆ ಪಡೆಯಲಾಗುವುದು ಎಂದರು.
ಸರ್ಕಾರ ಬಡಿದೆಬ್ಬಿಸಿದ ಪಾದಯಾತ್ರೆ...
ಬಳ್ಳಾರಿ ಚಲೋ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಇದರಿಂದಾಗಿ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ಅಧಿವೇಶನ ನಡೆಸಿತು. ರಾಜ್ಯದಲ್ಲಿನ ಭಂಡ ಸರ್ಕಾರ ಯಾವ ರೀತಿಯ ಆಡಳಿತ ನೀಡುತ್ತಾ ಇದೆ ಎಂಬುದನ್ನು ಜನರಿಗೆ ತಿಳಿಸಿ ಅದಕ್ಕೆ ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ಹೇಗೆ ಸರ್ಕಾರವನ್ನು ಕಿವಿ ಹಿಂಡಬೇಕು ಎಂಬುದರ ಬಗ್ಗೆಯೂ ಕಾರ್ಯತಂತ್ರ ರೂಪಿಸಲಾಗುವುದು. ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಎರಡು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ...
ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಈ ಯಾತ್ರೆಯಲ್ಲಿ ಗಮನ ಹರಿಸಲಾಗುವುದು. ಪ್ರತಿ ದಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಪಾದಯಾತ್ರೆಯನ್ನೂ ನಡೆಸಲಾಗುವುದು. ಚುನಾವಣಾ ತಂಡದ ಜೊತೆಗೆ ಸಮಾಲೋಚನೆ ಮಾಡಲಾಗುವುದು. ಕಾರ್ಯಕರ್ತರಿಗೆ ಹೊಸ ಹುರುಪು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ರಾಜ್ಯ ಕಚೇರಿ ಸಹ ಕಾರ್ಯದರ್ಶಿ ವಿಶ್ವನಾಥ ಅಣಜಿ ಇದ್ದರು.