ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಅಧಿಕೃತ ವೇಳಾಪಟ್ಟಿ ಹಾಗೂ ಪೂಜಾ ಮುಹೂರ್ತಗಳು ನಿಗದಿಯಾಗಿದ್ದು, ಸಾಂಸ್ಕೃತಿಕ ನಗರಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಅಕ್ಟೋಬರ್ 11ರಂದು ಬೆಳಗ್ಗೆ 11:50 ರಿಂದ 12:13ರವರೆಗಿನ ಶುಭ ಧನುರ್ ಲಗ್ನದಲ್ಲಿ ಕೌಶಲ ಮತ್ತು ಧಾರ್ಮಿಕ ಕೇಂದ್ರ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ನಾಡಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀಗಳು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಬೆಳ್ಳಿ ರಥದ ಪಲ್ಲಕ್ಕಿಯಲ್ಲಿರುವ ಮಹಿಷಾಸುರ ಮರ್ದಿನಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಯುವಜನತೆಯ ಆಕರ್ಷಣೆಯಾದ 'ಯುವ ದಸರಾ' ಅಕ್ಟೋಬರ್ 13ರಿಂದ ಆರಂಭಗೊಂಡು ಐದು ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಲಿದೆ. ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ 'ಜಂಬೂ ಸವಾರಿ' ಮೆರವಣಿಗೆ ಅಕ್ಟೋಬರ್ 21ರಂದು ಅದ್ದೂರಿಯಾಗಿ ನಡೆಯಲಿದೆ.
ಮಧ್ಯಾಹ್ನ 1:36 ರಿಂದ 1:56ರ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅರಮನೆ ಆವರಣದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದು, ಬಳಿಕ ಸಂಜೆ 4:10 ರಿಂದ 4:30ರ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಈ ಬಾರಿಯ ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆ 'ಕಂಬಳ' ಹೊಸ ಸೇರ್ಪಡೆಯಾಗಿದ್ದು, ಅಕ್ಟೋಬರ್ 18ರಂದು ಮುಖ್ಯಮಂತ್ರಿಗಳು ಎರಡು ದಿನಗಳ ಈ ಕಂಬಳ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.