ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸೇವೆ ಮತ್ತು ಆಡಳಿತಾತ್ಮಕ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ವಿವಿಧೆಡೆ ಸುಟ್ಟುಹೋಗಿರುವ ಹಾಗೂ ಕಾರ್ಯಕ್ಷಮತೆ ಕಳೆದುಕೊಂಡಿರುವ ಸುಮಾರು 3,075 ಮಳೆ ಮಾಪನ ಕೇಂದ್ರಗಳನ್ನು 39.97 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ. ಕಳೆದ ಅಧಿವೇಶನದಲ್ಲಿ ರಾಜ್ಯದ ಬರಪರಿಸ್ಥಿತಿ ಹಾಗೂ ನಿಖರ ಮಳೆಯ ಮಾಹಿತಿ ಸಿಗದಿರುವ ಬಗ್ಗೆ ತೀವ್ರ ಚರ್ಚೆಯಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆಯ ವಿವಿಧ ನಿಗಮಗಳಿಗೆ ಒಟ್ಟು 304 ಕೋಟಿ ರೂಪಾಯಿ ವೆಚ್ಚದಲ್ಲಿ 800 ಹೊಸ ಬಸ್‌ಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಇದರನ್ವಯ ಕೆಎಸ್‌ಆರ್‌ಟಿಸಿಗೆ (KSRTC) 400 ಹೊಸ ಬಸ್‌ಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) 200 ಬಸ್‌ಗಳು ಹಾಗೂ ಬಿಎಂಟಿಸಿಗೆ (BMTC) 200 ನಗರ ಬಸ್‌ಗಳನ್ನು ನೂತನವಾಗಿ ಸೇರ್ಪಡೆಗೊಳಿಸಲಾಗುವುದು.
ಇದಲ್ಲದೆ, ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ರಾಜ್ಯದ ನ್ಯಾಯಬೆಲೆ ಅಂಗಡಿಗಳಿಗೆ ಇ-ಪಿಒಎಸ್ (e-PoS) ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ಐರಿಸ್ ಸ್ಕ್ಯಾನರ್‌ಗಳನ್ನು ವಾರ್ಷಿಕ ಅಂದಾಜು 44.37 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಡಿಗೆ ಆಧಾರದ ಮೇಲೆ ಅಳವಡಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಜೊತೆಗೆ, 'ಕರ್ನಾಟಕ ಕಾನೂನು ಮಾಪನಶಾಸ್ತ್ರ (ಜಾರಿ) (ತಿದ್ದುಪಡಿ) ನಿಯಮಗಳು, 2026' ಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ.