ಶಿವಮೊಗ್ಗ: ಪ್ರೀತಿಸಿ ಕೈಹಿಡಿದ ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯನ್ನು ಕಲ್ಲು, ಚಾಕು ಹಾಗೂ ಮಚ್ಚಿನಿಂದ ಹೊಡೆದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದ ಪಾತಕಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಹಾಗೂ 2,10,000 ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ನಗರದ ಟಿಪ್ಪು ನಗರದ 6ನೇ ಕ್ರಾಸ್ ನಿವಾಸಿ ಅಬ್ದುಲ್ ಶೋಹೇಬ್ (ಅಲಿಯಾಸ್ ಬಿಡಿ) ಶಿಕ್ಷೆಗೆ ಒಳಗಾದ ಅಪರಾಧಿ.
ಘಟನೆಯ ವಿವರ:
ಅಬ್ದುಲ್ ಶೋಹೇಬ್ ತಾನು ಪ್ರೇಮಿಸಿ ವಿವಾಹವಾಗಿದ್ದ ಕೌಸರ್ ಫಿಸಾಳ ಶೀಲದ ಬಗ್ಗೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದೇ ದ್ವೇಷದಲ್ಲಿ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿ ಕೊಂದಿದ್ದ. ಈ ಕೃತ್ಯದ ಕುರಿತು ಮೃತಳ ತಾಯಿ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಎಂ.ಎಸ್. ದೀಪಕ್ ಹಾಗೂ ಮಂಜುನಾಥ್ ಅವರು ಸಮಗ್ರ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.
ನ್ಯಾಯಾಲಯದ ಆದೇಶ:
ವಿಚಾರಣೆ ನಡೆಸಿದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು, ಆರೋಪಿ ಮೇಲಿನ ಕೊಲೆ ಹಾಗೂ ಕೌಟುಂಬಿಕ ದೌರ್ಜನ್ಯದ ಆರೋಪಗಳು ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ ಜೀವಾವಧಿ ಕಾರಾಗೃಹ ವಾಸದ ಜೊತೆಗೆ ₹2.10 ಲಕ್ಷ ದಂಡ ವಿಧಿಸಲಾಗಿದ್ದು, ದಂಡ ಕಟ್ಟಲು ತಪ್ಪಿದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಪುಷ್ಪ ಪಿ.ಓ. ವಾದ ಮಂಡಿಸಿದ್ದರೆ, ತನಿಖಾ ಪ್ರಕ್ರಿಯೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ಕಿರಣ್‌ಕುಮಾರ್, ಪ್ರಮೀಳಾ ಹಾಗೂ ಭಾಗ್ಯ ಸಾಕ್ಷ್ಯ ಸಂಗ್ರಹಕ್ಕೆ ಸಹಕರಿಸಿದ್ದರು.