ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ಈ ಹಿಂದೆ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರೀಕೃತ ದಾಖಲಾತಿ ಘಟಕ (ಸಿಎಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಯಾವೆಲ್ಲಾ ಹುದ್ದೆಗಳಿಗೆ ವಿಸ್ತರಣೆ?
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಸಾಮಾನ್ಯ ಶಿಕ್ಷಕರು (PST - 1 ರಿಂದ 5ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 (PE - 1 ರಿಂದ 8ನೇ ತರಗತಿ), ಪದವೀಧರ ಪ್ರಾಥಮಿಕ ಶಿಕ್ಷಕರು (GPT - 6 ರಿಂದ 8ನೇ ತರಗತಿ), ವಿಶೇಷ ಶಿಕ್ಷಕರು (CST - 1 ರಿಂದ 8ನೇ ತರಗತಿ) ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಸಹಶಿಕ್ಷಕರ ವೃಂದ (AM) ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಗಳ ನೇಮಕಾತಿಗಾಗಿ ಜಿಲ್ಲಾ ಹಾಗೂ ವಿಭಾಗವಾರು ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು. ಪ್ರಸ್ತುತ ಈ ಎಲ್ಲಾ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ಪ್ರಮುಖ ದಿನಾಂಕಗಳ ವಿವರ:
-
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಅಕ್ಟೋಬರ್ 2026
-
ಶುಲ್ಕ ಪಾವತಿ ಖಚಿತಪಡಿಸಿಕೊಳ್ಳಲು ಕೊನೆಯ ದಿನಾಂಕ: 28 ಅಕ್ಟೋಬರ್ 2026
ಪರೀಕ್ಷೆಗಳು ಮುಂದೂಡಿಕೆ:
ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಈ ಹಿಂದೆ ಅಧಿಸೂಚನೆಯಲ್ಲಿ ನಿಗದಿಪಡಿಸಲಾಗಿದ್ದ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನೂತನ ಪರೀಕ್ಷೆಗಳನ್ನು 2026ರ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ನಿಖರವಾದ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಈ ಕುರಿತ ಅಧಿಕೃತ ಸೇರ್ಪಡೆ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಇಲಾಖೆಯ ಅಧಿಕೃತ ವೆಬ್‌ಸೈಟ್ https://schooleducation.karnataka.gov.in/cacell/en ನಲ್ಲಿಯೂ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಭ್ಯರ್ಥಿಗಳಿಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರದ ಕಚೇರಿಗಳನ್ನು ಸಂಪರ್ಕಿಸಬಹುದು. ಜೊತೆಗೆ ಕೇಂದ್ರೀಕೃತ ದಾಖಲಾತಿ ಘಟಕದ ಸಹಾಯವಾಣಿ ಸಂಖ್ಯೆಗಳಾದ 080-22483140, 22483145, ಮೊಬೈಲ್ ಸಂಖ್ಯೆ 9449588020 ಅಥವಾ [email protected] ಇ-ಮೇಲ್ ವಿಳಾಸವನ್ನು ಸಂಪರ್ಕಿಸಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..
