ನವದೆಹಲಿ: ವೈದ್ಯರಾಗುವ ಕನಸು ಹೊತ್ತಿರುವ ದೇಶದ ಲಕ್ಷಾಂತರ ನೀಟ್-ಯುಜಿ (NEET-UG) ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಸಿಹಿಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿಗಾಗಿ ದೇಶಾದ್ಯಂತ ಬರೋಬ್ಬರಿ 13,186 ಹೆಚ್ಚುವರಿ ಎಂಬಿಬಿಎಸ್ (MBBS) ಸೀಟುಗಳಿಗೆ ಎನ್‌ಎಂಸಿ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ದೇಶದ ಒಟ್ಟು 836 ವೈದ್ಯಕೀಯ ಕಾಲೇಜುಗಳಲ್ಲಿನ ಲಭ್ಯ ಸೀಟುಗಳ ಸಂಖ್ಯೆ 1,40,214ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ನೀಟ್ ಯುಜಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಈ ಪರಿಷ್ಕೃತ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆಯಾಗಿದ್ದು, ಪ್ರವೇಶಾತಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ.
ಖಾಸಗಿ ಕಾಲೇಜುಗಳಲ್ಲೇ ಸಿಂಹಪಾಲು
ಹೊಸದಾಗಿ ಮಂಜೂರಾಗಿರುವ ಒಟ್ಟು 13,186 ಸೀಟುಗಳ ಪೈಕಿ 391 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 10,400 ಸೀಟುಗಳು ಲಭಿಸಿವೆ. ಉಳಿದ 2,786 ಸೀಟುಗಳು 445 ಸರ್ಕಾರಿ ಮೆಡಿಕಲ್ ಕಾಲೇಜುಗಳ ಪಾಲಾಗಿವೆ. ಈ ಸೇರ್ಪಡೆಯೊಂದಿಗೆ ಸರ್ಕಾರಿ ಕೋಟಾದ ಒಟ್ಟು ಸೀಟುಗಳ ಸಂಖ್ಯೆ 63,971ಕ್ಕೆ ತಲುಪಿದ್ದರೆ, ಖಾಸಗಿ ಕಾಲೇಜುಗಳ ಸೀಟುಗಳ ಸಂಖ್ಯೆ 76,243ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಸೀಟುಗಳ ಲಭ್ಯತೆಯಲ್ಲಿ ಶೇಕಡಾ 10.4ರಷ್ಟು ಗಣನೀಯ ಏರಿಕೆ ದಾಖಲಾಗಿದೆ.
ರಾಜ್ಯವಾರು ಹಂಚಿಕೆಯಲ್ಲಿ ಕರ್ನಾಟಕವೇ ನಂಬರ್ 1
ದೇಶದಲ್ಲೇ ಅತಿ ಹೆಚ್ಚು ಹೆಚ್ಚುವರಿ ಸೀಟುಗಳನ್ನು ಪಡೆದ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯಕ್ಕೆ ಗರಿಷ್ಠ 1,650 ಹೊಸ ಸೀಟುಗಳು ಮಂಜೂರಾಗಿದ್ದು, ಇದರೊಂದಿಗೆ ರಾಜ್ಯದ 76 ಮೆಡಿಕಲ್ ಕಾಲೇಜುಗಳಲ್ಲಿನ ಒಟ್ಟು ಸೀಟುಗಳ ಸಾಮರ್ಥ್ಯ 15,745ಕ್ಕೆ ಏರಿಕೆಯಾಗಿದೆ.
ಉಳಿದಂತೆ ತಮಿಳುನಾಡು 1,250, ಬಿಹಾರ 1,240, ಉತ್ತರ ಪ್ರದೇಶ 1,200, ರಾಜಸ್ಥಾನ 1,100, ತೆಲಂಗಾಣ 1,010 ಹಾಗೂ ಪಶ್ಚಿಮ ಬಂಗಾಳ 975 ಹೆಚ್ಚುವರಿ ಸೀಟುಗಳನ್ನು ಪಡೆದುಕೊಂಡಿವೆ. ಮಹಾರಾಷ್ಟ್ರಕ್ಕೆ 550 ಸೀಟುಗಳು ಲಭಿಸಿವೆ.
ಏಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶೂನ್ಯ
ಒಟ್ಟು 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಟು ಹೆಚ್ಚಳವಾಗಿದ್ದರೂ, ದೆಹಲಿ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ದಾದ್ರಾ ಮತ್ತು ನಗರ ಹವೇಲಿಗಳಲ್ಲಿ ಯಾವುದೇ ಹೊಸ ಸೀಟು ಸೇರ್ಪಡೆಯಾಗಿಲ್ಲ. ಹಿಮಾಚಲ ಪ್ರದೇಶಕ್ಕೆ 1, ಮಣಿಪುರಕ್ಕೆ 25 ಹಾಗೂ ಗೋವಾ, ಪಂಜಾಬ್, ತ್ರಿಪುರಾ ರಾಜ್ಯಗಳಿಗೆ ತಲಾ 50 ಸೀಟುಗಳು ಲಭಿಸಿವೆ.
ಕೌನ್ಸೆಲಿಂಗ್ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ
ಅನುಮೋದಿತ ಸೀಟ್ ಮ್ಯಾಟ್ರಿಕ್ಸ್ ಪ್ರಕಾರವೇ ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವಂತೆ ಆಯೋಗವು ಕಟ್ಟುನಿಟ್ಟಿನ ಆದೇಶ ನೀಡಿದೆ. ಕಾಲೇಜುಗಳು ತಮ್ಮ ಮಂಜೂರಾದ ಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ ಕಠಿಣ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಪ್ರಸ್ತುತ ಎರಡನೇ ಸುತ್ತಿನ ಹಂಚಿಕೆ ಪ್ರಕ್ರಿಯೆ ಮುಂದುವರಿದಿದ್ದು, ಮೆಡಿಕಲ್ ಸೀಟಿನ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಈ ಹೊಸ ಸೀಟುಗಳು ದೊಡ್ಡ ವರದಾನವಾಗಲಿವೆ.