ಬೆಂಗಳೂರು / ನವದೆಹಲಿ: ಭಾರತದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ದೇಶದ ಯುವ ಸಮುದಾಯಕ್ಕೆ ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಒಟ್ಟು 13,186 ಹೊಸ ಎಂ.ಬಿ.ಬಿ.ಎಸ್. (MBBS) ಸೀಟುಗಳ ಸೇರ್ಪಡೆಗೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಈ ಕುರಿತು ತಮ್ಮ ಅಧಿಕೃತ 'ಎಕ್ಸ್' (X) ಖಾತೆಯಲ್ಲಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ದೇಶದ ಆರೋಗ್ಯ ಮೂಲಸೌಕರ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಇದು ಹೊಸ ಮೈಲಿಗಲ್ಲಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ 1.40 ಲಕ್ಷ ಗಡಿ ದಾಟಿದ ಒಟ್ಟು ಎಂ.ಬಿ.ಬಿ.ಎಸ್. ಸೀಟುಗಳು ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ದೇಶದ ಒಟ್ಟು 836 ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಎಂ.ಬಿ.ಬಿ.ಎಸ್. ಸೀಟುಗಳ ಸಂಖ್ಯೆ ಸಾರ್ವಕಾಲಿಕ ದಾಖಲೆಯ 1,40,214ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣ ಲಭ್ಯತೆಯನ್ನು ಹೆಚ್ಚಿಸುವ ಗೌರವಾನ್ವಿತ ಪ್ರಧಾನಮಂತ್ರಿ ಅವರ ದೂರದರ್ಶಿತ್ವದ ನೇತೃತ್ವದಲ್ಲಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ. ಸೀಟುಗಳ ಈ ಗಣನೀಯ ಏರಿಕೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ಸಾವಿರಾರು ವಿದ್ಯಾರ್ಥಿಗಳ ಕನಸುಗಳಿಗೆ ನೆರವಾಗಲಿದೆ.
1,650 ಹೊಸ ಸೀಟುಗಳೊಂದಿಗೆ ಮುಂಚೂಣಿಯಲ್ಲಿ ಕರ್ನಾಟಕ ಈ ಬಾರಿಯ ಸೀಟುಗಳ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಗಮನಾರ್ಹ ಸಾಧನೆ ಮಾಡಿದ್ದು, ಅಗ್ರಸ್ಥಾನದಲ್ಲಿದೆ. ರಾಜ್ಯಕ್ಕೆ ಒಟ್ಟು 1,650 ಹೊಸ ಎಂ.ಬಿ.ಬಿ.ಎಸ್. ಸೀಟುಗಳು ಲಭ್ಯವಾಗಿದ್ದು, ಇದರೊಂದಿಗೆ ಕರ್ನಾಟಕದಲ್ಲಿರುವ ಒಟ್ಟು ಸೀಟುಗಳ ಸಂಖ್ಯೆ 15,745 ಕ್ಕೆ ಏರಿಕೆಯಾಗಿದೆ. ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಈ ಸಾಧನೆಯು ಹೆಮ್ಮೆಯ ಸಂಗತಿಯಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ಮತ್ತು ವೈದ್ಯಕೀಯ ಸೇವೆ ಒದಗಿಸಲು ಭಾರಿ ಉತ್ತೇಜನ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.