ಬೆಂಗಳೂರಿನಲ್ಲಿ ದೈವಿಕ ಕೃಪೆಯಿಂದ ಸಿಕ್ಕಿದ್ದ 5 ಕೆಜಿ ಚಿನ್ನಾಭರಣ ನೀಡುವುದಾಗಿ ನಂಬಿಸಿ ಅಕ್ಕಸಾಲಿಗರೊಬ್ಬರಿಗೆ ಬರೋಬ್ಬರಿ 1.3 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣ ಮೂಲದ ಆರೋಪಿ ಭೂತಂ ಲಿಂಗಯ್ಯ ಎಂಬಾತನ ವಿರುದ್ಧ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ಆರೋಪಿ ಭೂತಂ ಲಿಂಗಯ್ಯ ಸೆಲ್ವರಾಜ್ ಆಚಾರಿ ಅವರ ಕುಟುಂಬದೊಂದಿಗೆ ನಿಕಟ ಒಡನಾಟ ಹೊಂದಿದ್ದನು. ಸೆಲ್ವರಾಜ್ ಅವರ ಸೊಸೆಯ ಅಸ್ತಮಾ ಕಾಯಿಲೆ ಹಾಗೂ ಸೆಲ್ವರಾಜ್ ಅವರ ಮಂಡಿನೋವಿಗೆ ಔಷಧ ನೀಡುವ ಮೂಲಕ ಅವರ ವಿಶ್ವಾಸ ಗಳಿಸಿದ್ದನು. ಸೆಲ್ವರಾಜ್ ಅಕ್ಕಸಾಲಿಗನೆಂಬ ಹಿನ್ನೆಲೆಯನ್ನು ತಿಳಿದುಕೊಂಡಿದ್ದ ಆರೋಪಿ, ಹಣ ಲಪಟಾಯಿಸುವ ದುರುದ್ದೇಶದಿಂದ ತನ್ನ ಬಳಿ ದೇವಿಯ ಕೃಪೆಯಿಂದ ದೊರೆತ 5 ಕೆಜಿ ಚಿನ್ನವಿದೆ ಎಂದು ನಂಬಿಸಿದ್ದನು. ದೊಡ್ಡ ಚಿನ್ನದ ಅಂಗಡಿ ಆರಂಭಿಸಲು ಆಸೆ ಹುಟ್ಟಿಸಿದ್ದಲ್ಲದೆ, ಈ ಚಿನ್ನವನ್ನು ಖರೀದಿಸಿದರೆ ಐಶ್ವರ್ಯ ಮತ್ತು ವ್ಯಾಪಾರ ವೃದ್ಧಿಯಾಗುತ್ತದೆ ಎಂದು ನಂಬಿಸಿದ್ದನು. ಆರಂಭದಲ್ಲಿ ಪರೀಕ್ಷೆಗಾಗಿ ಅಸಲಿ ಚಿನ್ನದ ಸಣ್ಣ ನಾಣ್ಯವೊಂದನ್ನು ನೀಡಿದ್ದರಿಂದ ಸೆಲ್ವರಾಜ್ ಆತನ ಮಾತನ್ನು ಸಂಪೂರ್ಣವಾಗಿ ನಂಬಿದ್ದರು.
ವಂಚನೆಯು ಹಂತ ಹಂತವಾಗಿ ಮುಂದುವರಿದು, ಎರಡೂವರೆ ವರ್ಷಗಳ ಅವಧಿಯಲ್ಲಿ ಸೆಲ್ವರಾಜ್ ಅವರಿಂದ ಹಂತ ಹಂತವಾಗಿ ಒಟ್ಟು 1.3 ಕೋಟಿ ರೂ.ಗಳನ್ನು ಆರೋಪಿ ಪಡೆದುಕೊಂಡಿದ್ದನು. ಈ ಹಣಕ್ಕಾಗಿ ಸೆಲ್ವರಾಜ್ ತಮ್ಮ ಜಮೀನು ಹಾಗೂ ಕುಟುಂಬದವರ ಒಡವೆಗಳನ್ನು ಮಾರಾಟ ಮಾಡಿದ್ದರು. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಸಾವನಪ್ಪುತ್ತೀರಿ ಎಂದು ಆರೋಪಿ ಜೀವ ಬೆದರಿಕೆ ಹಾಕಿ, ದೇವರ ಮುಂದೆ ಪ್ರಮಾಣ ಕೂಡ ಮಾಡಿಸಿದ್ದನು. ಹಣ ಪಡೆದರೂ ಚಿನ್ನ ನೀಡದಿದ್ದಾಗ ಅನುಮಾನಗೊಂಡು ಸೆಲ್ವರಾಜ್ ವಿಚಾರಿಸಿದಾಗ, ತಂದೆಯ ಅನಾರೋಗ್ಯದ ಕಾರಣ ನೀಡಿ ಊರಿಗೆ ತೆರಳಿರುವುದಾಗಿ ತಿಳಿಸಿದ್ದ ಆರೋಪಿ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಮೋಸಹೋಗಿರುವುದನ್ನು ಅರಿತ ಸಂತ್ರಸ್ತ ಸೆಲ್ವರಾಜ್ ಸಿಟಿ ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.